ಕಾಗದ ಕಾರ್ಖಾನೆ ಪುನಶ್ಚೇತನ

ಕಾಗದ ಕಾರ್ಖಾನೆ ಪುನಶ್ಚೇತನ

ಶಿವಮೊಗ್ಗ : ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿದ್ದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂಬಂಧ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಮತ್ತು ಕೈಗಾರಿಕಾ ಇಲಾಖೆ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸ್ಥಗಿತಗೊಂಡಿದ್ದ ಎಂಪಿಎಂ ಕಾಗದ ಕಾರ್ಖಾನೆಯನ್ನು ಪುನರಾರಂಭಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಇರುವ ಅರಣ್ಯ ಸಂಪತ್ತನ್ನು ಬಳಸಿಕೊಂಡು ಕಾರ್ಖಾನೆಯನ್ನು ಸುಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಮಹತ್ವದ ನಿರ್ಣಯದಿಂದಾಗಿ ಜಿಲ್ಲೆಯ ಜನರಲ್ಲಿ ಹರ್ಷೋತ್ಸಾಹ ಮೂಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳಿಂದ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಸ್ಥಗಿತಗೊಂಡಿದ್ದರಿಂದ ಸಹಸ್ರಾರು ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಅಸಂಖ್ಯಾತ ನೌಕರರು ಕುಟುಂಬದ ನಿರ್ವಹಣೆಗಾಗಿ ಉದ್ಯೋಗ ಅರಸಿ ಪಟ್ಟಣ ತೊರೆದಿದ್ದರು. ಮತ್ತೆ ಕೆಲವರು ಸರ್ಕಾರ ವಿವಿಧ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಖಾನೆಯ ಯಂತ್ರಗಳು ತುಕ್ಕು ಹಿಡಿಯುವಂತಾಗಿತ್ತು. ಈ ಕಾರ್ಖಾನೆಯನ್ನು ಪುನರಾರಂಭಿಸುವ ಸಂಬಂಧ ಸಂಸದ ಬಿ.ವೈ. ರಾಘವೇಂದ್ರ ಮುಖ್ಯಮಂತ್ರಿಗಳ ಗಮನಕ್ಕೆ ಸೆಳೆದು ಒತ್ತಾಯಿಸಿದರು.

Related