ಶಿಕ್ಷಕ ಅಂದ್ರೆ ಹೀಗಿರಬೇಕು

  • In State
  • February 6, 2020
  • 450 Views
ಶಿಕ್ಷಕ ಅಂದ್ರೆ ಹೀಗಿರಬೇಕು

ಮಂಡ್ಯ, ಫೆ. 6 : ನನ್ನ ಸರ್ವಿಸ್ ಮುಗಿದ್ರೆ ಸಾಕು. ನಾನು ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಇರುತ್ತೇನೆ. ಅಲ್ಲದೆ ನಂಗೆ ಕೆಲಸ ಮಾಡಲು ಆಗ್ತಾ ಇಲ್ಲ. ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹಲವು ಮಂದಿ ಸರ್ಕಾರಿ ನೌಕರರು ಅಂದುಕೊಳ್ಳುತ್ತಾರೆ. ಆದರೆ ಮಂಡ್ಯದ ಶಿಕ್ಷಕರೊಬ್ಬರು ನಿವೃತ್ತಿ ಆದರು ಸಹ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಉಚಿತವಾಗಿ ಪಾಠ ಮಾಡುತ್ತಿದ್ದು, ಎನಿಸಿಕೊಂಡಿದ್ದಾರೆ.
ಹೌದು. ಒಂದು ವರ್ಷದ ಹಿಂದಷ್ಟೇ ಶಿಕ್ಷಕ ವೃತ್ತಿಯಿಂದ ಪಿ.ಆರ್.ಸತ್ಯನಾರಾಯಣ್ ನಿವೃತ್ತರಾಗಿದ್ದಾರೆ. ಆದರೂ ಇವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಮಂದೂರಿನ ಪ್ರಾಥಮಿಕ ಶಾಲೆಗೆ ನಿತ್ಯ ಬಂದು ಪಾಠ ಪ್ರವಚನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ಇವರು ರಾಮಂದೂರಿಗೆ ಬರೋದು ಅಕ್ಕಪಕ್ಕದ ಹಳ್ಳಿಯಿಂದಲ್ಲ. ಬದಲಾಗಿ ಬೆಂಗಳೂರಿನಿಂದ. ಮೂಲತಃ ನಂಜನಗೂಡಿನ ಸತ್ಯನಾರಾಯಣ್ ಕುಟುಂಬ ಸದ್ಯ ಬೆಂಗಳೂರಲ್ಲಿ ವಾಸವಿದೆ. ಬೆಂಗಳೂರಿನಿಂದ ಮಂಡ್ಯಗೆ ನಿತ್ಯ ರೈಲಲ್ಲಿ ಬರುವ ಸತ್ಯನಾರಾಯಣ್, ಅಲ್ಲಿಂದ ಬೈಕಲ್ಲಿ ರಾಮಂದೂರಿಗೆ ಸೇರಿಕೊಳ್ಳುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳಿಗೆ ಪಾಠ, ಆಟ ಹೇಳಿಕೊಡ್ತಾರೆ. ಅಂದ ಹಾಗೇ, ಸತ್ಯನಾರಾಯಣ್ ನಿವೃತ್ತರಾಗಿದ್ದು ಇದೇ ಶಾಲೆಯಲ್ಲಿ. 100ಕ್ಕೂ ಹೆಚ್ಚು ಮಕ್ಕಳಿರೋ ಶಾಲೆಯಲ್ಲಿ ಸದ್ಯ ನಾಲ್ವರು ಶಿಕ್ಷಕರಷ್ಟೇ ಇದ್ದಾರೆ. ಮಕ್ಕಳ ಶಿಕ್ಷಣಕ್ಕೆ ತೊಂದ್ರೆ ಆಗಬಾರದು ಅನ್ನೋ ದೃಷ್ಟಿಯಿಂದ ಸತ್ಯನಾರಾಯಣ್ ಉಚಿತವಾಗಿ ಪಾಠ ಮಾಡೋದನ್ನು ಮುಂದುವರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಯಾವುದೇ ಸಂಬಳ ತೆಗೆದುಕೊಳ್ಳದೇ ಕೆಲಸ ಮಾಡ್ತಿರುವ ಸತ್ಯನಾರಾಯಣ್, ಶಾಲೆಗೆ ಟಿವಿ, ಅಡುಗೆ ಉಪಕರಣಗಳು, ಸೈನ್ಸ್ ಲ್ಯಾಬ್ಗೆ ಬೇಕಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸತ್ಯನಾರಾಯಣ್ ಸೇವಾ ಮನೋಭಾವಕ್ಕೆ ಸಹದ್ಯೋಗಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.

ಒಟ್ಟಿನಲ್ಲಿ ನಿವೃತ್ತರಾದರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಕಟಿಬದ್ಧರಾಗಿ ದುಡಿಯುತ್ತಿರುವ ಸತ್ಯನಾರಾಯಣ್ ಇತರರಿಗೆ ಮಾದರಿಯಾಗಿದ್ದಾರೆ.

Related