ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ: ಡಿಕೆಶಿ

ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ: ಡಿಕೆಶಿ

ಬೆಂಗಳೂರು: ಇಂದು ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಮೊದಲ ಹಂತದ ಚುನಾವಣೆಯ ಪ್ರಚಾರ ಕೊನೆಯ ದಿನವಾಗಿದೆ. ಪ್ರಚಾರ ಕೊನೆಯಾಗುವ ಮುನ್ನ ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ದೊಡ್ಡ ಸಂದೇಶ ರವಾನಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆ ಪಿ ನಂಜುಂಡ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ರಾಜ್ಯದ ಹಿಂದುಳಿದ ವರ್ಗದ ನಾಯಕರಾದ ಕೆ.ಪಿ ನಂಜುಂಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಮಿಸುತ್ತಿದ್ದಾರೆ. ನನ್ನ ರಾಜಕಾರಣದ ಅನುಭವದಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಹಿಂದುಳಿದ ವರ್ಗದ ಪೈಕಿ ಕಾಯಕ ಸಮಾಜದಲ್ಲಿ ಸಂಘಟನೆಗೆ ಶಕ್ತಿ ಹೊಂದಿರುವವರು ಎಂದರೆ ಅದು ಕೆ.ಪಿ ನಂಜುಂಡಿ ಎಂದು ಭಾವಿಸಿದ್ದೇನೆ.

ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ. ಈಗಿನ ನಾಯಕರುಗಳು ಒನ್ ಮ್ಯಾನ್ ಆರ್ಮಿ ರೀತಿ ಇರುತ್ತಾರೆ. ಆದರೆ ನಂಜುಂಡಿ ಅವರು ಬಹಳ ದೊಡ್ಡ ಪ್ರತಿಭೆ. ನಾನು ಪಕ್ಷದ ಅಧ್ಯಕ್ಷನಾದ ನಂತರ ಅವರನ್ನು ಪಕ್ಷಕ್ಕೆ ತರಲು ಅನೇಕ ಪ್ರಯತ್ನ ಮಾಡಿದೆ. ಇವರು ನಮ್ಮ ಪಕ್ಷಕ್ಕೆ ಆಸ್ತಿಯಾಗಿ ಉಳಿಯಲಿ ಏನಾದರೂ ಮಾಡು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು. ನಾನು, ಮುಖ್ಯಮಂತ್ರಿಗಳು, ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ನಂಜುಂಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.

ನಂಜುಂಡಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ಹಾಗೂ ನಿಮ್ಮೆಲ್ಲರ ಪರವಾಗಿ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇನೆ. ಇವರ ಜತೆ ವಿಶ್ವಕರ್ಮ ಸಮಾಜಕ್ಕೆ ಸೇರಿದ ಅನೇಕ ನಾಯಕರು ಕೂಡ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ನಮ್ಮ ಕರೆಗೆ ಸ್ಪಂದಿಸಿ ಈ ತೀರ್ಮಾನ ಮಾಡಿದ್ದೀರಿ, ನಿಮ್ಮ ಉದ್ದೇಶವೇನು ಎಂದು ನಾನು ನಂಜುಂಡಿ ಅವರನ್ನು ಕೇಳಿದೆ. ಅದಕ್ಕೆ ಅವರು, ನಾವು ಕಾಯಕ ಸಮಾಜದವರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಚಿನ್ನದ ಬೆಲೆ ಗ್ರಾಂ ಗೆ 2800 ಇತ್ತು. ಈಗ ಅದು 7500 ಆಗಿದೆ. ನಾವು ವಿಶ್ವಕರ್ಮ ಸಮಾಜದವರು ಮಾಂಗಲ್ಯ ಮಾಡುತ್ತೇವೆ. ಈಗ ಅದನ್ನು ಮಾಡಲಾಗದ ಪರಿಸ್ಥಿತಿ ಸೃಷ್ಟಿಸಲಾಗಿದೆ. ಈ ಬಿಜೆಪಿ ಸರ್ಕಾರದಲ್ಲಿ ಇರುವುದು ಸರಿಯಲ್ಲ. ಬಡವರ ಪರವಾದ ಸರ್ಕಾರ ಅಂದರೆ ಕಾಂಗ್ರೆಸ್. ರಾಜ್ಯ ಸರ್ಕಾರ ನೀಡುತ್ತಿರುವ ಹಣ ಹಾಗೂ ಉಳಿತಾಯದಿಂದ ಬಡ ಮಹಿಳೆಯರು ಸಣ್ಣಪುಟ್ಟ ಚಿನ್ನದ ಆಭರಣ ಹಾಗೂ ಮಾಂಗಲ್ಯ ಮಾಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಒಂದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂದು ಪಕ್ಷ ಸೇರುತ್ತಿದ್ದೇನೆ ಎಂದು ಕೆ. ಪಿ. ನಂಜುಂಡಿ ಅವರು ನನ್ನ ಬಳಿ ಹೇಳಿದರು.

 

Related