ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ

ವಿದ್ಯುತ್ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ

ಮುದ್ದೇಬಿಹಾಳ : ವಿದ್ಯುತ್ ತಿದ್ದುಪಡಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಹೊಂದಿದ್ದು ಯಾವುದೇ ಕಾರಣಕ್ಕೂ ಈ ಕಾಯ್ದೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಪಟ್ಟಣದಲ್ಲಿ ಹೆಸ್ಕಾಂ ಉಪ ವಿಭಾಗದ ನಾಲ್ಕು ಶಾಖೆಗಳ ನೂರಾರು ನೌಕರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಮಾತನಾಡಿ, ಈ ಕಾಯ್ದೆ ಜಾರಿಯಿಂದಾಗಿ ವಿದ್ಯುತ್ ಬೆಲೆ ಆಯೋಗ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ರೈತರು, ಗ್ರಾಹಕರ ಹಿತವನ್ನು ಈ ಕಾಯ್ದೆ ಬಲಿ ಕೊಡಲಿದೆ. ಅಲ್ಲದೇ ಹಲವು ವರ್ಷಗಳಿಂದ ಜಿವಿಪಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮರಣ ಶಾಸನವಾಗಿದೆ ಎಂದು ಹೇಳಿದರು.
ತಂಗಡಗಿ ಶಾಖಾಧಿಕಾರಿ ಎಂ.ಎಸ್. ತೆಗ್ಗಿನಮಠ ಮಾತನಾಡಿ, ಈ ಕಾಯ್ದೆ ಜಾರಿಯಾದರೆ ನೌಕರರು ಬೀದಿಗೆ ಬರುತ್ತೇವೆ. ಸೇವಾ ಭದ್ರತೆಯನ್ನು ಕಸಿದುಕೊಂಡು ಹೆಸ್ಕಾಂನಲ್ಲಿ ಕೆಲಸ ಮಾಡುವವರನ್ನು ಬೀದಿಗೆ ತಳ್ಳಲಿದೆ ಎಂದು ಹೇಳಿದರು.

ಶಾಖಾಧಿಕಾರಿಗಳಾದ ಎಸ್.ಎಸ್. ಪಾಟೀಲ, ಆರ್.ಪಿ. ಹಿರೇಮಠ, ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಆರೇಶಂಕರ, ಉಪಾಧ್ಯಕ್ಷ ಎಸ್.ಬಿ. ಗಣಾಚಾರಿ, ಕಾರ್ಯದರ್ಶಿ ಆರ್.ಎಂ. ನಾಯ್ಕಮಕ್ಕಳ, ಬಿ.ಎ. ಮಡಿವಾಳರ, ಎಸ್ಸಿ,ಎಸ್ಟಿ ನೌಕರ ಸಂಘದ ಅಧ್ಯಕ್ಷ ಜಗದೀಶ ಹಿರೇಮನಿ ಸೇರಿದಂತೆ ನಾಲತವಾಡ,ಢವಳಗಿ, ತಾಳಿಕೋಟಿ ಹಾಗೂ ಮುದ್ದೇಬಿಹಾಳ ಶಾಖೆಯ ಮತ್ತಿತರರು ಇದ್ದರು.

Related