ಜಮೀರ್‌ಗೆ ದಾಖಲೆ ಸಲ್ಲಿಕೆಗೆ ಸೂಚನೆ..

  • In Crime
  • July 11, 2022
  • 202 Views
ಜಮೀರ್‌ಗೆ ದಾಖಲೆ ಸಲ್ಲಿಕೆಗೆ ಸೂಚನೆ..

ಬೆಂಗಳೂರು, ಜು 11 :  ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಕಳೆದ ವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆದಾಯಕ್ಕಿಂತ ಎರಡು ಸಾವಿರ ಪಟ್ಟು ಜಾಸ್ತಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ 87 ಕೋಟಿ ಹೆಚ್ಚುವರಿ ಆಸ್ತಿಯ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ದಾಳಿ ನಡೆದ ಮಾರನೇ ದಿನವೇ ಕಚೇರಿಗೆ ಬಂದು ದಾಖಲೆ ಒದಗಿಸುವಂತೆ ಎಸಿಬಿ ಅಧಿಕಾರಿಗಳು ತಿಳಿಸಿದ್ದು, ಬಕ್ರೀದ್ ಕಾರಣ ನೀಡಿ ಜಮೀರ್ ಕಾಲಾವಕಾಶ ಪಡೆದಿದ್ದರು. ಸದ್ಯ ಬಕ್ರೀದ್ ಮುಗಿದ ಕಾರಣ ಜಮೀರ್ ದಾಖಲೆ ಸಮೇತ ಎಸಿಬಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಈ ನಡುವೆ ಆದಾಯಕ್ಕಿಂತ ಶೇ.೨೦೩೧ ಪಟ್ಟು ಹೆಚ್ಚು ಅಕ್ರಮ ಆಸ್ತಿಯನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಸಂಪಾದಿಸಿದ್ದಾರೆ ಎಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿತ್ತು.

ಇಡಿ ವರದಿ ಆಧರಿಸಿ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ, ಜಮೀರ್ ಅವರ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಜಮೀರ್ ಅವರು 87.44 ಕೋಟಿ (ಶೇ.2031) ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಇಡಿ ಉಲ್ಲೇಖಿಸಿದ್ದು, ಈ ವರದಿ ಆಧರಿಸಿ ಶಾಸಕರ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ.

Related