ಬಾಯ್‌ಬಡ್ಕಿ ಅಲ್ಲ, ಕಿರುತೆರೆ ಮರೆಯಲ್ಲ!

ಬಾಯ್‌ಬಡ್ಕಿ ಅಲ್ಲ, ಕಿರುತೆರೆ ಮರೆಯಲ್ಲ!

ಚಂದನವನದಲ್ಲಿ ಪ್ರಸ್ತುತ ಮಿಂಚುತ್ತಿರುವ ಬಹುಪಾಲು ನಟಿಯರಲ್ಲಿ ಬಹುತೇಕರು ಕಿರುತೆರೆ ಮೂಲದಿಂದ ಬಂದವರು. ಈ ಸಾಲಿಗೆ ಇದೀಗ ಮತ್ತೋರ್ವ ನಟಿ ಸೇರ್ಪಡೆಯಾಗಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ‘ರೌಡಿ ಬೇಬಿ’ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿ ಬೆಳೆದ ನಿಶಾ ಇದೀಗ ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ಅಂದೊಂದಿತ್ತು ಕಾಲ’ದಲ್ಲಿ ನಾಯಕಿಯಾಗಿ ಚಂದನವನಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಕಿರುತೆರೆಗೂ ಹಿರಿತೆರೆಗೂ ಬಹಳಷ್ಟು ವ್ಯತ್ಯಾಸವಿದೆ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಳ್ಳೆಯ ಕಥೆ ಬಂದಾಗ ಖಂಡಿತವಾಗಿಯೂ ಚಂದನವನಕ್ಕೆ ಕಾಲಿಡಲು ಸಿದ್ಧವಾಗಿದ್ದೆ. ಇದೀಗ ವಿನಯ್ ರಾಜ್‌ಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತೋಷದ ವಿಷಯ ಎನ್ನುತ್ತಾರೆ. ಟಿವಿಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಬೃಹತ್ ಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಬಹಳಷ್ಟು ಸವಾಲುಗಳಿವೆ. ಧಾರಾವಾಹಿಯಲ್ಲಿ ಇರುವ ನನ್ನ ಪಾತ್ರಕ್ಕೆ ನನಗೇ ಆದ ಅಭಿಮಾನಿಗಳ ಬಳಗವಿದೆ. ಅದಕ್ಕೆ ತಕ್ಕ ನ್ಯಾಯವನ್ನು ನೀಡಬೇಕು ಎನ್ನುವುದು ನನ್ನ ಗುರಿ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಜನರ ಮನಸ್ಸು ಮುಟ್ಟುವಂತೆ ವಹಿಸುತ್ತೇನೆ’ ಎಂದು ಹೇಳುತ್ತಾರೆ ನಿಶಾ.

Related