ನಿರಾಣಿ ಒಬ್ಬ ಸಿಡಿ ಬಾಬ: ಆಲಂ ಪಾಷ

ನಿರಾಣಿ ಒಬ್ಬ ಸಿಡಿ ಬಾಬ: ಆಲಂ ಪಾಷ

ಬೆಂಗಳೂರು : ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳಿವೆ. ಯಾರದ್ದೂ ಬೇಕಾದರೂ ಸಿಡಿ ಇರಬಹುದು. ಒಂದು ವೇಳೆ ಇವರಿಗೆ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಆಗಬಹುದು ಎಂದು ಉದ್ಯಮಿ ಎ.ಆಲಂ ಪಾಷ ಆರೋಪಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಗೇಶ್ ನಿರಾಣಿ ರಾಜ್ಯದ ಮಂತ್ರಿಗೂ ಸಿಡಿ ಇದೆ ಎಂದು ಹೆದರಿಸಿದ್ದಾರೆ. ಅವರು ಕೋರ್ಟ್ನಿಂದ ಸ್ಟೇ ತರುತ್ತಿದ್ದಾರೆ ಎಂದರು.
ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್‌ನಲ್ಲಿ ನಿರಾಣಿ ತಮ್ಮ ಪ್ರಭಾವ ಬಳಿಸಿ ಅಕ್ರಮ ಮಾಡಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆಯುತ್ತಿದ್ದಾರೆ. ಆ ಹಣವನ್ನು ನಕಲಿ ಹೆಸರು, ಖಾತೆಯ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಬ್ಯಾಂಕ್‌ನಲ್ಲಿ ಜಮೆ ಮಾಡಿದ್ದಾರೆ. ರೈತರಿಗೆ ಸಿಗುವ ಶೇ.4% ಬಡ್ಡಿ ಕೃಷಿ ಸಾಲವನ್ನು ರೈತರ ನಕಲಿ ಆದಾರ್ ಕಾರ್ಡ್ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆಯಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಲಂ ಪಾಷ ಆರೋಪಿಸಿದರು.

ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಆಲಂ ಪಾಷ, ಬಿ.ಎಸ್.ಯಡಿಯೂರಪ್ಪ ಮೇಲಿರುವ ಆರೋಪಗಳಿಂದಲೇ ಹೈಕಮಾಂಡ್ ಕೆಳಗಿಳಿಸುತ್ತಿದೆ ಎಂದರು. ಉದ್ಯಮಿ ಆಲಂ ಪಾಷ ಅವರು ಈ ಹಿಂದೆಯೂ ಸಚಿವ ನಿರಾಣಿ ವಿರುದ್ಧ ಆರೋಪ ಮಾಡಿದ್ದರು. ನಿರಾಣಿಯವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕದಿದ್ದರೆ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದರು.

Related