ಮೋದಿ ಮೌನ, ರಾಹುಲ್ ವಾಗ್ದಾಳಿ

ಮೋದಿ ಮೌನ, ರಾಹುಲ್ ವಾಗ್ದಾಳಿ

ನವದೆಹಲಿ: ಭಾರತ-ಚೀನಾ ಗಡಿಪ್ರದೇಶ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಿನ್ನೆ ಎರಡೂ ದೇಶಗಳ ಸೈನಿಕರ ನಡುವ ಸಂಘರ್ಷ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚೆಗೆಷ್ಟೇ ಟ್ವೀಟ್ ಮಾಡಿ, ಲಡಾಖ್‌ನಲ್ಲಿ ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಮಿಲಿಟರಿ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಚೀನಾ ಸೈನಿಕರ ದಾಳಿಗೆ ಭಾರತದ ಯೋಧರು ಪ್ರಾಣ ಕಳೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಇಷ್ಟೆಲ್ಲ ಆಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಮೌನ ವಹಿಸಿದ್ದಾರೆ? ಈಗಲೇ ಸಾಕಷ್ಟು ಆಯಿತು. ಏನಾಗುತ್ತಿದೆ ಎಂಬುದನ್ನು ನಾವು ತಿಳಿಯಬೇಕಿದೆ.

ನಮ್ಮ ಯೋಧರನ್ನು ಕೊಲ್ಲಲು , ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಚೀನಾಕ್ಕೆ ಎಷ್ಟು ಧೈರ್ಯ? ಎಂದು ಆಕ್ರೋಶ ಭರಿತರಾಗಿ ಟ್ವೀಟ್ ಮಾಡಿದ್ದಾರೆ. ಭಾರತದ ಯೋಧರು ಹುತಾತ್ಮರಾಗುತ್ತಿದ್ದಂತೆ ಟ್ವೀಟ್ ಮೂಲಕವೇ ಸಂತಾಪ ವ್ಯಕ್ತಪಡಿಸಿದ್ದರು. ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಸೈನಿಕರ ಸಾವಿನ ನೋವನ್ನು ಶಬ್ದಗಳಲ್ಲಿ ವಿವರಿಸಲು ಆಗುತ್ತಿಲ್ಲ ಎಂದಿದ್ದರು.

Related