ಹಾಲಿನ ದರ ಹೆಚ್ಚಳ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಹಾಲಿನ ದರ ಹೆಚ್ಚಳ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ದಿನ ಬಳಕೆ ವಸ್ತುಗಳು ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿದ್ದು, ಇದರಿಂದ ಜನಸಾಮಾನ್ಯರ ಜೆಬಿಗೆ ಕತ್ತಲೆ ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷ ಗುಡುಗಿದೆ.

ಹೌದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇನ್ನೂ ಅಕ್ಕಿ ಸಮರ ಮುಗಿಯುವ ಮುನ್ನವೇ ಮತ್ತೊಂದು ವಿಷಯದಲ್ಲಿ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಸಿದ್ಧಗೊಂಡಂತಿದೆ. ನಂದಿನಿ ಹಾಲಿನ ದರ ಏರಿಕೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷ ಬಿಜೆಪಿ ಮುಗಿಬಿದ್ದಿದೆ.

ನಂದಿನಿ ಹಾಲಿನ ದರ 5 ರೂಪಾಯಿ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ, ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಎಂಫ್ ನೂತನ ಅಧ್ಯಕ್ಷರಾದ ಭೀಮಾ ನಾಯ್ಕ್‌ ನಿನ್ನೆಯಷ್ಟೇ ಹೇಳಿದ್ದರು.

ಇದೇ ವಿಚಾರಕ್ಕೆ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಎಂಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರಿಗೆ 5 ರೂಪಾಯಿ ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ. ಸಿಎಂ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರದಲ್ಲಿ ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ. ಈ ಜನದ್ರೋಹಿ ನಿರ್ಧಾರದಿಂದ ಸರ್ಕಾರ ದೂರ ಉಳಿಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಟ್ವೀಟ್ ಮಾಡಿದೆ.

 

Related