ಮೇಯರ್ ಮೀಸಲಾತಿ : ಸರ್ಕಾರಕ್ಕೆ ನೋಟಿಸ್

ಮೇಯರ್ ಮೀಸಲಾತಿ : ಸರ್ಕಾರಕ್ಕೆ ನೋಟಿಸ್

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಪಾಲಿಕೆ ಸದಸ್ಯ ಸಮಿವುಲ್ಲಾ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತ್ತು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಿ 2021ರ ಫೆ.11ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆ ಸೂಚನೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

2018ರಿಂದ ಸತತವಾಗಿ ಮೇಯರ್ ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. 2018ರ ಜ.24ರಿಂದ ನವೆಂಬರ್ 17ರವರೆಗೆ ಎಸ್‌ಸಿ-ಮಹಿಳೆ, ಸಾಮಾನ್ಯ-ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. 2020ರಲ್ಲಿ ಬಿಸಿಎ-ಮಹಿಳೆ ಇತ್ತು.

ಈಗ ಸಾಮಾನ್ಯ-ಮಹಿಳೆ ನಿಗದಿಪಡಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, ಸರ್ಕಾರದ ಆ ಸೂಚನೆ ರದ್ದುಪಡಿಸಿ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಜಯಕುಮಾರ್ ಎಸ್. ಪಾಟೀಲ್ ವಾದ ಮಂಡಿಸಿದ್ದರು.

Related