ಬಿಜೆಪಿ ಮಹಿಳಾ ಮೋರ್ಚಾದ ನಾರಿ ಶಕ್ತಿಯ ಸಂಗಮ

ಬಿಜೆಪಿ ಮಹಿಳಾ ಮೋರ್ಚಾದ ನಾರಿ ಶಕ್ತಿಯ ಸಂಗಮ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಹಾ ಸಮಾವೇಶವನ್ನು ಮಾರ್ಚ್ 19ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‍ಎಸ್‍ಆರ್ ಲೇಔಟ್‍ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿತು.

ಈ ವೇಳೆ ಬೊಮ್ಮನಹಳ್ಳಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ರಾಮಚಂದ್ರ ಮಾತನಾಡಿ, ಬಿಜೆಪಿ ಮಹಿಳಾ ಮೋರ್ಚಾ ಮಹಾ ಸಮಾವೇಶವನ್ನು ಮಾರ್ಚ್ 19ರಂದು ಹಮ್ಮಿಕೊಂಡಿರುವುದರ ಪ್ರಯುಕ್ತ ಭೂಮಿಪೂಜೆ ಮಾಡಲಾಯಿತು. ಈ ಸಮಾವೇಶಕ್ಕೆ 15 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ಸಾಧ್ಯತೆ ಇದ್ದು, ಶಾಸಕ ಸತೀಶ್ ರೆಡ್ಡಿ ಅವರು ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸುತ್ತಿರುವ ಈ ಮಹಾ ಸಮಾವೇಶ ಆಯೋಜನೆಗೆ ಹೆಜ್ಜೆ ಹೆಜ್ಜೆಗೂ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಬೆಂಬಲದಿಂದ ಈ ಮಹಾ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಹಿಳಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಮಾತನಾಡಿ, ಶಾಸಕ ಸತೀಶ್ ರೆಡ್ಡಿ ಹಾಗೂ ಜಿಲ್ಲಾಧ್ಯಕ್ಷರಾದ ಎನ್ ಆರ್ ರಮೇಶ್ ಅವರ ನೇತೃತ್ವದಲ್ಲಿ ಮಹಿಳಾ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಸಂಸದೆ ಸುಮಲತಾ ಅಂಬರೀಶ್, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ, ಕೇಂದ್ರ ಸರ್ಕಾರದ ನಾಯಕರು ಸೇರಿದಂತೆ ಗಣ್ಯಾಧಿಗಣ್ಯರು ಆಗಮಿಸುತ್ತಿದ್ದು, ಈ ಸಮಾವೇಶ ನಾರಿ ಶಕ್ತಿಯ ಸಂಗಮ ಎಂದು ಹೇಳಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಮೋರ್ಚಾ ಎಲ್ಲಾ 10 ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಬೊಮ್ಮನಹಳ್ಳಿ ಮಂಡಲದ ಪದಾಧಿಕಾರಿಗಳು, ವಾರ್ಡ್ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿಗಳು ಮತ್ತು ಪ್ರಭಾರಿಗಳು ಉಪಸ್ಥಿತರಿದ್ದರು.

Related