ಮಧ್ಯಪ್ರದೇಶ ಸರ್ಕಾರ ಉಳಿಸಲು ಡಿ. ಕೆ.ಶಿ ಅಖಾಡ!

ಮಧ್ಯಪ್ರದೇಶ ಸರ್ಕಾರ ಉಳಿಸಲು ಡಿ. ಕೆ.ಶಿ ಅಖಾಡ!

ಬೆಂಗಳೂರು, ಮಾ. 18 : ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಬೆಂಗಳೂರಿನಲ್ಲಿ ಸುದ್ದಿ ಮಾಡುತ್ತಿದೆ. ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸರ್ಕಾರವನ್ನು ಉಳಿಸಲು ಅಖಾಡಕ್ಕೆ ಇಳಿದಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ. ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಯಲಹಂಕ ಬಳಿಯ ರಮಡಾ ಹೋಟೆಲ್ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್, ಡಿ. ಕೆ. ಶಿವಕುಮಾರ್ಗೆ ಪೊಲೀಸರು ಅವಕಾಶ ನೀಡುತ್ತಿಲ್ಲ.
ಮಧ್ಯಪ್ರದೇಶದ ಕಾಂಗ್ರೆಸ್ ಘಟಕ ಸುಪ್ರೀಂಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿದೆ. ಬಿಜೆಪಿ ನಮ್ಮ ಶಾಸಕರನ್ನು ಅಪಹರಣ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ. ರಮಡಾ ಹೋಟೆಲ್ಗೆ ಕರ್ನಾಟಕ ಸರ್ಕಾರದ ಕಡೆಯಿಂದ ಪೊಲೀಸ್ ಭದ್ರತೆ ನೀಡಲಾಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ. ಬುಧವಾರ ಮುಂಜಾನೆ ಅವರು ಶಾಸಕರ ಭೇಟಿಗೆ ಅವಕಾಶ ನೀಡಬೇಕು ಎಂದು ಯಲಹಂಕ ಬಳಿಯ ರಮಡಾ ಹೋಟೆಲ್ ಮುಂದೆ ಧರಣಿ ಕೂತಿದ್ದರು. ಅಮೃತಹಳ್ಳಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Related