ಭ್ರಷ್ಟ ಸರ್ಕಾರವೇ ತೊಲಗಲಿ

ಭ್ರಷ್ಟ ಸರ್ಕಾರವೇ ತೊಲಗಲಿ

ಹುಬ್ಬಳ್ಳಿ : ಬಿಜೆಪಿ ಸರ್ಕಾರ ಅಂದರೇನೆ ಭ್ರಷ್ಟ ಸರ್ಕಾರ. ಒಬ್ಬ ಮುಖ್ಯಮಂತ್ರಿ ಹೋದರೆ ಮತ್ತೊಬ್ಬ ಬಂದು ಕೂರುತ್ತಾರೆ. ಹೀಗಾಗಿ ಈ ಸರ್ಕಾರವೇ ತೊಲಗಲಿ ಎಂಬುವುದೇ ನನ್ನ ನಿಲುವು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಮಠಾಧೀಶರು ಈ ರಾಜಕೀಯ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದನ್ನು ಬಿಟ್ಟು ಪ್ರವಚನ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿ ಎಂದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಿಕ್ಕಿ ಬಿದ್ದಿದ್ದು, ತಕ್ಷಣ ಅವರನ್ನು ಸಂಪುಟದಿAದ ಕೈಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಯಡಿಯೂರಪ್ಪ ಸರ್ಕಾರದ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತು ಇದೆ. ಹಾಗೆಯೇ ನಡ್ಡಾ ಅವರು ಅದನ್ನೇ ಹೇಳಬೇಕು. ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು.

ರಾಜ್ಯದಲ್ಲಿನ ಪ್ರವಾಹ ಸ್ಥಿತಿ ಎದುರಾಗಿದ್ದು, ಸರ್ಕಾರ ತಕ್ಷಣ ಪರಿಹಾರ ಕಾರ್ಯ ಕೈಗೊಂಡು ಪರಿಹಾರ ಒದಗಿಸಬೇಕು. ಉಸ್ತುವಾರಿ ಸಚಿವರು, ಅಧಿಕಾರಿಗಳನ್ನು ತಕ್ಷಣ ಕಳುಹಿಸಿ ಪ್ರವಾಹ ಪೀಡಿತ ಪ್ರದೇಶದ ವಸ್ತು ಸ್ಥಿತಿ ವರದಿ ಪಡೆಯಬೇಕು. ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಕಳೆದ ಬಾರಿ ಪ್ರವಾಹ ಆದಾಗಲೂ ಬೆಳೆ ನಷ್ಟ ಆಗಿತ್ತು. ಮನೆಗಳು ಬಿದ್ದಿದ್ದವು. ಯಾವುದಕ್ಕೂ ಪರಿಹಾರ ಕೊಟ್ಟಿಲ್ಲ. ಈಗಲಾದರೂ ತಕ್ಷಣಕ್ಕೆ ಪ್ರವಾಹ ಪೀಡಿತ ಪ್ರದೇಶದ ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದರು

Related