ನೆಹರೂ ಅತ್ಯಂತ ಹೃದಯವಂತಿಕೆ ಇದ್ದ ಅಗ್ರಗಣ್ಯ ನಾಯಕ;ಸಿಎಂ

ನೆಹರೂ  ಅತ್ಯಂತ ಹೃದಯವಂತಿಕೆ ಇದ್ದ ಅಗ್ರಗಣ್ಯ ನಾಯಕ;ಸಿಎಂ

ಬೆಂಗಳೂರು, ನ. 14: ಶಿಕ್ಷಣ ಸಂಸ್ಥೆಗಳು, ವಿಜ್ಞಾನ-ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ, ವಿಶ್ವ ವಿದ್ಯಾಲಯಗಳ ಸ್ಥಾಪನೆ ಮಾಡಿದ್ದು, ಕೃಷಿ ಅಭಿವೃದ್ಧಿ ನೆಹರೂ ಅವರ ದೂರದೃಷ್ಟಿಯ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

KPCC ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿ ಏನೇನೂ ಇರಲಿಲ್ಲ. ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ನೀರಾವರಿ ವ್ಯವಸ್ಥೆ ಇರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಿಯಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಪ್ರಜಾಪ್ರಭುತ್ವವಾದಿ ದೇಶವಾಗಿ ಭಾರತವನ್ನು ಕಟ್ಟಿ ನಿಲ್ಲಿಸಿದವರು ನೆಹರೂ ಎಂದು ಉದಾಹರಣೆಗಳ ಸಮೇತ ವಿವರಿಸಿದರು.

ಶಿಕ್ಷಣ ಸಂಸ್ಥೆಗಳು, ವಿಜ್ಞಾನ, ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಅಧ್ಯಯನ ಸಂಸ್ಥೆಗಳು, ಅಣೆಕಟ್ಟುಗಳು, ಆಸ್ಪತ್ರೆಗಳು ಸೇರಿ ಆಧುನಿಕ ಭಾರತದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ಷೇತ್ರಗಳನ್ನೂ ವಿಶ್ವ ಮಟ್ಟದ ಗುಣಮಟ್ಟದಲ್ಲಿ ಆಗಿನ ಕಾಲಕ್ಕೇ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಅಷ್ಟೆ. ಇವರ್ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿ ತಪ್ಪಿಯೂ ಹೋರಾಡಿದವರಲ್ಲ. ಒಬ್ಬೇ ಒಬ್ಬ ಬಿಜೆಪಿ ಪರಿವಾರದ ಸದಸ್ಯ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿಲ್ಲ ಎಂದು ವ್ಯಂಗ್ಯವಾಡಿದರು.

ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಎನ್ನುವ ಕೀಳರಿಮೆ ಮತ್ತು ಅಳುಕಿನಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ 9 ವರ್ಷ ಜೈಲು ವಾಸ ಅನುಭವಿಸಿ 17 ವರ್ಷ ದೇಶದ ಪ್ರಧಾನಿ ಆಗಿದ್ದ ನೆಹರೂ ಅವರನ್ನು ಆಡಿಕೊಳ್ಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನೆಹರೂ ಅವರಿಗೆ ಅಪಾರ ನಂಬಿಕೆ ಇತ್ತು‌. 17 ವರ್ಷಗಳ ಕಾಲ ಪ್ರಧಾನಿ ಆಗಿದ್ದ ನೆಹರೂ ಅವರು ಚರ್ಚೆ, ಸಂವಾದದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸುವವರ ಕಟು ಟೀಕೆಗಳನ್ನೂ ಅತ್ಯಂತ ಸಹನೆಯಿಂದ ಸ್ವೀಕರಿಸುತ್ತಿದ್ದರು. ಅಷ್ಟು ದೊಡ್ಡ ವ್ಯಕ್ತಿತ್ವ ನೆಹರೂ ಅವರದ್ದಾಗಿತ್ತು. ವಿಶ್ವ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಲು ನೆಹರೂ ಅವರು ಭಾರತ ದೇಶಕ್ಕೆ ಹಾಕಿದ ಭದ್ರ ಬುನಾದಿ ಕಾರಣ ಎಂದು ಮೆಚ್ಚುಗೆ ಸೂಚಿಸಿದರು.

ನೆಹರೂ ಈ ದೇಶದ ಅತ್ಯಂತ ಹೃದಯವಂತಿಕೆ ಇದ್ದ ಅಗ್ರಗಣ್ಯ ನಾಯಕ ಎಂದು ಬಣ್ಣಿಸಿ ಇದಕ್ಕೆ ಹಲವು ಪ್ರಸಂಗಗಳನ್ನು ಉದಾಹರಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, CWC ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Related