ಕೂಡಲ ಸಂಗಮ ಬಸವತತ್ವದ ಅರಿವು ಮೂಡಿಸುವ ತಾಣವಾಗಬೇಕು : ಬೊಮ್ಮಾಯಿ ಸೂಚನೆ

ಕೂಡಲ ಸಂಗಮ ಬಸವತತ್ವದ ಅರಿವು ಮೂಡಿಸುವ ತಾಣವಾಗಬೇಕು : ಬೊಮ್ಮಾಯಿ ಸೂಚನೆ

ಬೆಂಗಳೂರು, ಜು 08: ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು ಹಾಗೂ ಬಸವ ತತ್ವದ ಅರಿವು ಮೂಡಿಸಬೇಕು. ಇದಕ್ಕೆ ಪೂರಕವಾಗಿ ಕೂಡಲಸಂಗಮವನ್ನು ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಿವಿಲ್ ಕಾಮಗಾರಿಗಳ ಜೊತೆಗೆ, ಕೂಡಲ ಸಂಗಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯೂಸಿಯಂನಲ್ಲಿ  ಬಸವಣ್ಣನವರ ಜೀವನಚರಿತ್ರೆ, ಅವರ ವಿಚಾರಧಾರೆ ಹಾಗೂ ಅವರ ಸಮಕಾಲೀನ ಶರಣರ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಲು ಸೂಚಿಸಿದರು. ಇದಕ್ಕೆ ಅತ್ಯುತ್ತಮ ಮ್ಯೂಸಿಯಂ ಕ್ಯುರೇಟರ್ ಅವರನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು. ಮುಂದಿನ ಮೇ ಅಂತ್ಯದೊಳಗೆ ಮೊದಲ ಹಂತವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಬಸವ ಅಂತರರಾಷ್ಟ್ರೀಯ ಕೇಂದ್ರದ ಕಟ್ಟಡದ ಪರಿಷ್ಕೃತ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಪರಿಷ್ಕೃತ ಅಂದಾಜನ್ನು ಅನುಮೋದನೆಗಾಗಿ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಮಾರಾಟ ಮಳಿಗೆಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಕೂಡಲಸಂಗಮದ ಮಾರಾಟ ಮಳಿಗೆ ಬಾಡಿಗೆದಾರರು ಆರ್ಥಿಕ ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯ ಬಾಡಿಗೆ ಮೊತ್ತ ಮನ್ನಾ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಮುರುಗೇಶ್ ನಿರಾಣಿ, ಪ್ರಾಧಿಕಾರದ ವ್ಯಾಪ್ತಿಯ ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related