ಸಿಲಿಕಾನ್ ಸಿಟಿಯಲ್ಲಿ KSRTC ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

ಸಿಲಿಕಾನ್ ಸಿಟಿಯಲ್ಲಿ KSRTC ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

ಬೆಂಗಳೂರು: ರಾಜ್ಯದಲ್ಲಿ 2023 ನೇ ಸಾಲಿನ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳ ಬಾಕಿ ಇದ್ದು, ಸಾರ್ವಜನಿಕರು ತಮ್ಮ ಹಕ್ಕನ್ನು ಚಲಾಯಿಸಲು ಬೆಂಗಳೂರಿನಿಂದ ಬೇರೆ ಊರಿಗೆ ತೆರಳಬೇಕಾದರೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ಇಲ್ಲದೆ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ಮೇ 10ರ ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಇದರ ನಡುವೆ ಮೆಜೆಸ್ಟಿಕ್​ನಲ್ಲಿ ಬಸ್​ಗಾಗಿ ಜನರ ಪರದಾಟ ಹೆಚ್ಚಾಗಿದೆ. ಮತ ಚಲಾಯಿಸುವುದು ನಮ್ಮ ಹಕ್ಕು, ಮತದಾನ ಮಾಡಿ ಎಂದು ಅಭಿಯಾನಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದ್ದ ಅಧಿಕಾರಿಗಳು ಈ ಸಮಸ್ಯೆಗೆ ಕ್ಯಾರೇ ಎನ್ನುತ್ತಿಲ್ಲ.  ಕಡ್ಡಾಯ ಮತದಾನ ಎಂದು ಬೊಂಬಡಿ ಹೊಡೆಯುತ್ತಿದ್ದವರು ಈ ಬಗ್ಗೆ ಚರ್ಚೆ ಮಾಡ್ತೀವಿ, ಸಮಸ್ಯೆ ಬಗೆಹರಿಸುತ್ತೀವಿ ಎಂದು ಜಾರಿ ಕೊಳ್ಳುತ್ತಿದ್ದಾರೆ. ಮತದಾನ ಹೆಚ್ಚಿಸಲು ರಜೆ ಘೋಷಿಸಿಯೂ ಪ್ರಯೋಜನವಿಲ್ಲದಂತಾಗಿದೆ. ಮತ ಹಾಕಬೇಕು ಎಂದು ತಮ್ಮ ತಮ್ಮ ಊರಿಗೆ ಹೋಗುವವರು ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ 3,500 KSRTC ಬಸ್ ನೀಡಲಾಗಿದ್ದು ಬಸ್​ಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಮತದಾನ ಚಲಾಯಿಸಲು ತಮ್ಮ ತಮ್ಮ ಊರಿಗೆ ಹೊರಟಿರುವ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಮೆಜೆಸ್ಟಿಕ್ ಬರುವ ಪ್ರತಿ ಸಾರಿಗೆ ಬಸ್ ಫುಲ್ ರಶ್ ಆಗಿದೆ. ಈಗಾಗಲೇ ರಿಸರ್ವೇಷನ್ ಮಾಡಿದವರಿಗೆ ನಿರಾಳ. ಆದರೆ ಓಟ್ ಹಾಕಲು ಹೋಗುತ್ತಿರುವ ಜನರಿಗೆ ತೊಂದರೆ ಎದುರಾಗಿದೆ. ದೂರದೂರಿನಿಂದ ಪ್ರಯಾಣಿಸುವವರು ಕೂಡ ಬಸ್​ನಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಯಾಣಿಸುವಂತಾಗಿದೆ. ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಬಸ್ ಇಲ್ಲದೆ ಕಾಯುವಂತಹ ಸನ್ನಿವೇಶ ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಕಂಡು ಬಂದಿದೆ.

 

Related