ನೀರಿನ ಘಟಕಗಳ ದುರಸ್ತಿಗೆ ಆದ್ಯತೆ ಇರಲಿ

ನೀರಿನ ಘಟಕಗಳ ದುರಸ್ತಿಗೆ ಆದ್ಯತೆ ಇರಲಿ

ಗದಗ: ದುರಸ್ತಿಯಲ್ಲಿರುವ ಜಿಲ್ಲೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವೇ ದುರಸ್ತಿಗೊಳಿಸಲು ಅಗತ್ಯದ ಕ್ರಮ ಜರುಗಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ನಗರದ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಭಾಭವನದಲ್ಲಿ ನಡೆದ ಪಂಚಾಯತರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 439 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 416 ಚಾಲ್ತಿಯಿದ್ದು ದುರಸ್ತಿಯಲ್ಲಿರುವ ಬಾಕಿ 23 ಘಟಕಗಳನ್ನು ಶೀಘ್ರವೇ ದುರಸ್ತಿಗೊಳಿಸಿಬೇಕು. ಚಾಲ್ತಿ ಇರುವ ಘಟಕಗಳನ್ನು ಮೇಲಿಂದ ಮೇಲೆ ಪರಿಶೀಲಿಸುವಂತೆ ಅಗತ್ಯದ ಕ್ರಮ ವಹಿಸಲು ಸಚಿವರು ಸೂಚಿಸಿದರು.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಬದು, ಕೃಷಿ ಹೊಂಡಗಳನ್ನು ನಿರ್ಮಿಸಲು ಆದ್ಯತೆ ನೀಡಬೇಕು, ತೋಟಗಾರಿಕೆ ಬೆಳೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಉತ್ತೇಜನ ನೀಡಲು ಕ್ರಮ ವಹಿಸಲು ಅವರು ಸೂಚಿಸಿದರು.

ರೈತರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯತಿಗಳಲ್ಲಿ ಈರುಳ್ಳಿ ಸಂಗ್ರಹಣಾ ಘಟಕಗಳನ್ನು ನಿರ್ಮಿಸಲು ಅಗತ್ಯದ ಕ್ರಮ ಜರುಗಿಸಬೇಕು. ಅಲ್ಲದೇ ಹಸರೀಕರಣಕ್ಕೆ ಒತ್ತು ನೀಡಲು ರಸ್ತೆ ಬದಿಯಲ್ಲಿ ನೆಡುತೋಪು ಹಾಗೂ ರೈತರಿಗೆ ಸಸಿಗಳನ್ನು ಒದಗಿಸಲು ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿದ್ದು ನೀರು ಪೋಲಾಗದಂತೆ ಅಗತ್ಯದ ಕ್ರಮ ಜರುಗಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗಾಗಿ ಅಗತ್ಯದ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲು ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಜೂಗೌಡ ಕೆಂಚನಗೌಡ್ರ, ಸಂಸದರಾದ ಶಿವಕುಮಾರ ಉದಾಸಿ, ಜಿ.ಪಂ. ಉಪಾಧ್ಯಕ್ಷೆ ಶೋಭಾ ಮೇಟಿ, ಸದಸ್ಯರಾದ ಸಿದ್ದು ಪಾಟೀಲ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿ.ಪಂ. ಸಿ.ಇ.ಓ. ಡಾ.ಆನಂದ ಕೆ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿ,ಪಂ. ಉಪ ಕಾರ್ಯದರ್ಶಿ ಬಿ.ಕಲ್ಲೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related