ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ: ತುಷಾರ್ ಗಿರಿ ನಾಥ್

ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ: ತುಷಾರ್ ಗಿರಿ ನಾಥ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರರಾದ ತುಷಾರ್ ಗಿರಿ ನಾಥ್ ರವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಪಾಲಿಕೆ ಕೇಂದ್ರ ಕಛೇರಿಯ ಸಂಬಾಂಗಣ-01ರಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಬೇಕೆಂದು ಸೂಚನೆ ನೀಡಿದರು.

ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳ ಸರ್ವೇ ಕಾರ್ಯವನ್ನು ಪ್ರಾರಂಭಿಸಿ ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸದಿರುವ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಬೇಕು. ನಂತರ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅನುಷ್ಠಾನಗೊಳಿಸಲು ಗಡವು ನೀಡಬೇಕು. ಆದರೂ ನಾಮಫಲಕ ಬದಲಾಯಿಸದಿದ್ದಲ್ಲಿ ಮೊದಲು ಪರವಾನಗಿಯನ್ನು ಅಮಾನತುಗೊಳಿಸಬೇಕು. ತದನಂತರ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಸೂಚಿಸಿದರು.

ನಗರದ ಎಲ್ಲಾ ವಲಯಗಳಲ್ಲಿ 15 ದಿನಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ನೋಟಿಸ್ ನೀಡಬೇಕು. ಜೊತೆಗೆ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಮಾಲ್‌ಗಳ ಜೊತೆ ಸಭೆ ನಡಿಸಿ ಮಾಲ್ ಹಾಗೂ ಮಾಲ್ ಗಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅಳವಡಿಸಲು ಸೂಚನೆ ನೀಡಿ, ಕನ್ನಡ ನಾಮಫಲಕ ಅಳವಡಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಮಾಲ್ ಗಳಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಲಾಯಿತು.

ನಗರದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28ರೊಳಗಾಗಿ ಶೇ. 60 ರಷ್ಟು ಕನ್ನಡ ನಾಮಫಲಗಳನ್ನು ಅಳವಡಿಸಿರಬೇಕು. ಈ ಸಂಬಂಧ ಎಲ್ಲಾ ವಲಯಗಳಲ್ಲೂ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಯಿತು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಆಡಳಿತ ವಿಭಾಗದ ಉಪ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು, ವಲಯ ಆರೋಗ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related