ಲೋಕಸಭಾ ಚುನಾವಣೆ ನಂತರ ʼಕೈʼ ಸರ್ಕಾರ ಪತನ; ಯತ್ನಾಳ್ ಹೊಸ ಬಾಂಬ್

ಲೋಕಸಭಾ ಚುನಾವಣೆ ನಂತರ ʼಕೈʼ ಸರ್ಕಾರ ಪತನ; ಯತ್ನಾಳ್ ಹೊಸ ಬಾಂಬ್

ಅಥಣಿ:  ಬಿಜೆಪಿ ನ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿ ಆಗುತ್ತಲೇ ಇರುತ್ತಾರೆ.

ಅದರಂತೆ ಮತ್ತೊಂದು ಸ್ಫೋಟಕವಾದ ಮಾಹಿತಿಯನ್ನು ನೀಡಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ.

ಹೌದು, ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಈ ಬಾರಿ ಲೋಕಸಭಾ ಚುನಾವಣೆಯ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದು ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎಂಬ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದು, ಆ ಅದೃಷ್ಟ ನನಗೂ ಏಕೆ ಕೂಡಿ ಬರಬಾರದು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಜಾತಿ ವಿಷ ಬೀಜ ಬಿತ್ತಿ ಲಾಭ ಮಾಡಿಕೊಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಒಂದೇ ಧರ್ಮದ ಪರವಾದ ಅನೇಕ ಅಂಶಗಳಿವೆ ಎಂದು ದೂರಿದರು.

ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಜಮ್ಮು ಕಾಶ್ಮೀರಕ್ಕೆ ನೆಹರು 370ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ವಿರೋಧಿಸಿದ್ದರು. ಆದರೂ ನೆಹರು ಈ ವಿಧಿ ಜಾರಿಗೊಳಿಸಿದರು. ಇದನ್ನು ಪಂ.ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು. ಈಗ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದರು. ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತ ಮತ್ತು ಸನಾತನ ಧರ್ಮವನ್ನು ಉಳಿಸಬೇಕಿದೆ ಎಂದು ತಿಳಿಸಿದರು.

 

Related