ಜೆಡಿಎಸ್‌ನಲ್ಲಿ ಪರಿಷತ್ ಪೈಪೋಟಿ..!

ಜೆಡಿಎಸ್‌ನಲ್ಲಿ ಪರಿಷತ್ ಪೈಪೋಟಿ..!

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೈ ವಾರ್ಷಿಕ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿರುವ ಬೆನ್ನಲ್ಲೇ ಜೆಡಿಎಸ್‌ನಲ್ಲೇ ಆಕಾಂಕ್ಷಿಗಳಿAದ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ.

ಜೆಡಿಎಸ್‌ನಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದು, ಯಾವುದೇ ತೀರ್ಮಾನ ವರಿಷ್ಠರು ತೆಗೆದುಕೊಂಡಿಲ್ಲ. ವಿಧಾನಸಭೆಯಲ್ಲಿ ಶಾಸಕರನ್ನು ಹೊಂದಿರುವ ಆಧಾರದ ಮೇಲೆ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ.

ಒಂದು ಸ್ಥಾನಕ್ಕೆ ಸುಮಾರು 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಜೆಡಿಎಸ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಮಾಜಿ ಶಾಸಕ ಕೋನರೆಡ್ಡಿ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಸಿ. ರಾಜಣ್ಣ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ.

ಶರವಣ ಜೂ.30ರಂದು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ. ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಮಾಜಿ ಶಾಸಕ ಕೋನರೆಡ್ಡಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ. ರಾಜ್ಯಸಭೆಗೆ ಈ ಬಾರಿ ಸ್ಪರ್ಧೆ ಮಾಡದಿರುವ ಕುಪೇಂದ್ರರೆಡ್ಡಿ ಅವರ ಹೆಸರು ಕೂಡ ವಿಧಾನ ಪರಿಷತ್ ಚುನಾವಣೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

Related