ಲೋಕಸಭೆಗೆ ನುಗ್ಗಿದ ಆಗಂತುಕರು..!

ಲೋಕಸಭೆಗೆ ನುಗ್ಗಿದ ಆಗಂತುಕರು..!

ನವದೆಹಲಿ: ದೇಶದ ಪ್ರಜಾಪ್ರಭುತ್ವ ದೇಗುಲವಾದ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಲೋಕಸಭೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಿಂದ ಏಕಾಏಕಿ ಸದನಕ್ಕೆ ಧುಮುಕಿ ಅಶ್ರುವಾಯು ಮಾದರಿಯ (ಟಿಯರ್) ಅನಿಲ ಇದ್ದ ಕ್ಯಾನ್‌ಗಳನ್ನು ಸಿಡಿಸಿದ ಆಘಾತಕಾರಿ ಘಟನೆ ನಡೆದಿದ್ದು, ಇದರಿಂದ ಲೋಕಸಭೆಯ ಒಳಗೆ ಅಯೋಮಯ ಪರಿಸ್ಥಿತಿ ಸೃಷ್ಟಿಯಾಗಿ ಸದನವನ್ನು ಮುಂದೂಡಲಾಯಿತು.
ಈ ಘಟನೆಯಿಂದ ಸಂಸತ್ ಸದಸ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಹೊಸ ಸಂಸತ್ ಭವನದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳಿದ್ದರೂ ಭದ್ರತಾ ಲೋಪ ವ್ಯಕ್ತವಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
೨೨ ವರ್ಷಗಳ ಹಿಂದೆ ರಾಜಧಾನಿ ದೆಹಲಿಯ ಸಂಸತ್ ಭವನದ ಮೇಲೆ ಭಯೋತ್ಪಾದಕರು ಗುಂಡಿನ ಸುರಿಮಳೆಗರೆದು ವಿಧ್ವಂಸಕ ಕೃತ್ಯ ನಡೆಸಿದ ಘಟನೆ ಸಂಭವಿಸಿತ್ತು. ಈ ದಾಳಿ ನಡೆದು ೨೨ನೇ ವರ್ಷಾಚರಣೆ ನಡೆಯುತ್ತಿರುವ ಸಂದರ್ಭದಲ್ಲೇ ಅಪರಿಚಿತರಿಬ್ಬರು ಕಲಾಪ ನಡೆಯುತ್ತಿದ್ದ ವೇಳೆ ಲೋಕಸಭೆಯ ಸದನಕ್ಕೆ ಹಠಾತ್ತನೆ ನುಗ್ಗಿರುವ ಘಟನೆ ಆತಂಕಕ್ಕೆಡೆ ಮಾಡಿಕೊಟ್ಟಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ್ದಾರೆ.
ಮೂಲಗಳ ಪ್ರಕಾರ ಸಂಸದ ಪ್ರತಾಪ್‌ಸಿಂಹ ಅವರ ಹೆಸರಿನಲ್ಲಿ ಸಾಗರ್ ಎಂಬುವವರು ಪಾಸ್ ಪಡೆದಿದ್ದು, ಮತ್ತೊಬ್ಬರ ಹೆಸರು ಸದ್ಯಕ್ಕೆ ಲಭ್ಯವಾಗಿಲ್ಲ. ಸದನದ ಒಳಗೆ ಧುಮುಕಿರುವ ಈ ಇಬ್ಬರು ಮೊದಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸುತ್ತಿದ್ದರು. ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಧುಮುಕಿದ್ದು, ಸದನಗಳ ಬೆಂಚ್‌ಗಳ ಮೇಜುಗಳ ಮೇಲೆ ಓಡಾಡಿದ್ದಾರೆ. ಇವರಿಬ್ಬರು ಅಶ್ರುವಾಯು ಡಬ್ಬಿಗಳನ್ನು ಸದನದ ಒಳಗೆ ಎಸೆದರು. ಇದರಿಂದ ಸದನದಲ್ಲಿ ಅಶ್ರುವಾಯು ತುಂಬಿಕೊಂಡಿತ್ತು, ಇದರ ನಡುವೆ ಒಬ್ಬ ಸಭಾಧ್ಯಕರ ಪೀಠದತ್ತ ನುಗ್ಗಲು ಪ್ರಯತ್ನ ನಡೆಸಿದ್ದು, ತಕ್ಷಣವೇ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ.

Related