ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಬೆಳಗಾವಿ : ಎಲ್ಲರಿಗೂ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಮಂತ್ರಿ ಜಲಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಕೇಂದ್ರ ಸರಕಾರದ ಈ ಹಣಕಾಸು ನೆರವು ಬಳಸಿಕೊಂಡು ಜಿಲ್ಲೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಕೆಡಿಪಿ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುರಗೋಡಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ನಿರಂತರ ವಿದ್ಯುತ್ ಒದಗಿಸಲು ಅಗತ್ಯವಿರುವ ಎಕ್ಸ್ಪ್ರೆಸ್ ಫೀಡರ್ ಲೈನ್ ನಿರ್ಮಿಸಿ ಕೊಡಬೇಕು ಎಂದು ಹೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ 3ನೇ ಅಲೆ ನಿರ್ವಹಣೆ-ಸಿದ್ಧತೆಗೆ ಸೂಚನೆ

ಕೋವಿಡ್ 3ನೇ ಅಲೆ ಎದುರಾದರೆ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳನ್ನು ಒಟ್ಟಿಗೆ ಇರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. 3ನೇ ಅಲೆಯ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿವೆ. ಆದರೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗೊಬ್ಬರ ಮಾರಾಟ-ಪಿಕೆಪಿಎಸ್‌ಗಳಿಗೆ ಲೈಸೆನ್ಸ್ಗೆ ನಿರ್ದೇಶನ

ಗೊಬ್ಬರ ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಮುಕ್ತವಾಗಿ ಲೈಸೆನ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಸಮರ್ಪಕ ಪೂರೈಕೆಗೆ ಅನುಕೂಲವಾಗುವಂತೆ ರೈತರ ನೇತೃತ್ವದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲೈಸೆನ್ಸ್ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.

ಸಹಕಾರಿ ಸಂಘಗಳಿಗೆ ಗೊಬ್ಬರ ಮಾರಾಟಕ್ಕೆ ಲೈಸೆನ್ಸ್ ನೀಡುವಾಗ ಯಾವುದೇ ರೀತಿಯ ಷರತ್ತು ಹಾಕಬಾರದು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. 550 ಪಿಕೆಪಿಎಸ್‌ಗಳಿಗೆ ಈಗಾಗಲೇ ಲೈಸೆನ್ಸ್ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

ಬೆಳೆ ವಿಮೆ ಪರಿಹಾರ ತಾರತಮ್ಯ ನಿವಾರಣೆಗೆ ಸೂಚನೆ

ಧಾರವಾಡ ಜಿಲ್ಲೆಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಗ್ರಾಮಗಳ ರೈತರಿಗೆ ಬೆಳೆವಿಮೆ ಪರಿಹಾರ ನಿಗದಿಯಲ್ಲಿ ಹಲವಾರು ವರ್ಷಗಳಿಂದ ಮುಂದುವರಿದಿರುವ ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ವಿತರಣಾ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ

ಪ್ರವಾಹ ಸಂದರ್ಭದಲ್ಲಿ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ವಿದ್ಯುತ್ ಪರಿವರ್ತಕಗಳು, ವಿದ್ಯುತ್ ವಾಹಕಗಳು, ಕಂಬಗಳು ಹಾಗೂ ವಿದ್ಯುತ್ ತಂತಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು ಎಂದು ಶ್ರೀ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ, ಚಿಕ್ಕೋಡಿ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ಮಂಗಲಾ ಸುರೇಶ್ ಅಂಗಡಿ, ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಲ್ಲಾಧಿಕಾರಿ ಶ್ರೀ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಕೆ. ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Related