ದ್ರೌಪದಿ ಮುರ್ಮು ಪರ ಒಡಿಶಾದಲ್ಲಿ ಭಾರಿ ಸಂಭ್ರಮ

ದ್ರೌಪದಿ ಮುರ್ಮು ಪರ ಒಡಿಶಾದಲ್ಲಿ ಭಾರಿ ಸಂಭ್ರಮ

ನವದೆಹಲಿ ಜು21: 15 ನೇ ರಾಷ್ಟ್ರಪತಿ ಚುನಾವಣೆ ಭಾಗವಾಗಿ ಇಂದು ಸಂಸತ್ ಭವನದಲ್ಲಿ ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು ಕಣದಲ್ಲಿದ್ದಾರೆ.

ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ನಿಚ್ಚಳವಾಗಿರುವುದರಿಂದ ಅವರ ಹುಟ್ಟೂರಾದ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರಾಯ್‌ರಂಗಪುರ್‌ನಲ್ಲಿ ಸಂಭ್ರಮ ಮನೆ ಮಾಡಿದೆ.

ಒಡಿಶಾದಲ್ಲಿ ಜನ ಹಾಗೂ ಅನೇಕ ಸಂಘಟನೆಗಳು ಸ್ವಯಂಪ್ರೇರಿತವಾಗಿ ಸಂಭ್ರಮ ಆಚರಿಸುತ್ತಿದ್ದಾರೆ. ಮಯೂರ್‌ಭಂಜ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 10 ಸಾವಿರಕ್ಕು ಅಧಿಕ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದವರೊಬ್ಬರು ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇದರಿಂದ ಒಡಿಶಾ ಸೇರಿದಂತೆ ದೇಶದ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ಸಂಭ್ರಮ ಗರಿಗೆದರುವಂತೆ ಮಾಡಿದೆ.

 

Related