ದೇಶವನ್ನು ಕಾಡುತ್ತಿರುವ ಭಯಾನಕ ರೋಗ ಭ್ರಷ್ಟಾಚಾರ

ದೇಶವನ್ನು ಕಾಡುತ್ತಿರುವ ಭಯಾನಕ ರೋಗ ಭ್ರಷ್ಟಾಚಾರ

ಬಳ್ಳಾರಿ : ದೇಶವನ್ನು ಕ್ಯಾನ್ಸರ್‌ನಂತೆ ಕಾಡುತ್ತಿರುವ ಭಯಾನಕ ರೋಗ ಭ್ರಷ್ಟಾಚಾರ. ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಕೆಳಮಟ್ಟಕ್ಕೆ ತಳ್ಳಿದ ಕೀರ್ತಿ ಭ್ರಷ್ಟಾಚಾರಕ್ಕೆ ಸಲ್ಲುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪ ಅಧೀಕ್ಷಕರಾದ ಎ.ಸೂರ್ಯ ನಾರಾಯಣ ರಾವ್ ಅವರು ಹೇಳಿದರು.

ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅರಿವು ಸಪ್ತಾಹದ ಪ್ರಯುಕ್ತ ವಿಮ್ಸ್ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ವಿಮ್ಸ್ನ ಬಿ.ಸಿ ರಾಯ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಮಯದಲ್ಲಿ ಮನು ಕುಲವನ್ನು ಉಳಿಸಲು ವೈದ್ಯರು ಮಾಡಿದ ಸೇವೆ ಅನನ್ಯ. ಅಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ದೇಶದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪ್ರಾಮಾಣಿಕವಾಗಿ ಬದುಕು ಸಾಗಿಸುವುದು ನಮ್ಮ ಕರ್ತವ್ಯ ಹಾಗೂ ನೈತಿಕತೆ ಎಂದರು.

ಅತಿಯಾದ ಹಣ, ಸಂಪತ್ತು ಗಳಿಕೆಯ ಆಸೆ ಕುದುರೆ ಎನ್ನುವ ಬೆನ್ನತ್ತಿ ಹೋದರೆ, ಮೌಲ್ಯಗಳು ಕುಸಿಯಲಿವೆ. ನೈತಿಕ, ಆಧ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಂಡು ಭ್ರಷ್ಟಾಚಾರವನ್ನು ದೂರ ಇಡುವ ಕೆಲಸ ಮಾಡಿ, ಸಂವಿಧಾನದ ಆಶಯವನ್ನು ಮರೆಯದೆ ನಿರಂತರವಾಗಿ ಪಾಲಿಸಬೇಕು. ಸರ್ಕಾರಿ ಅಧಿಕಾರಿಗಳು ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಎಂದು ತಿಳಿಸಿದರು.

ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರ ಗೌಡ ಅವರು ಮಾತನಾಡಿ ಅ.26 ರಿಂದ ನ.11ರವರೆಗೆ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ. ಹಂತ ಹಂತವಾಗಿ ಭ್ರಷ್ಟಾಚಾರ ತಡೆಯುವ ಕೆಲಸ ಮಾಡಬೇಕು. ಸರ್ಕಾರದ ಹಲವಾರು ಯೋಜನೆಗಳ ಫಲ ಅರ್ಹ ಫಲಾನುಭವಿಗಳಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದರ ಕುರಿತು ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗದವರು ಗಮನಹರಿಸಬೇಕು ಎಂದು ಹೇಳಿದರು.

ನಾವೆಲ್ಲಾ ಮಾನವೀಯ ಮೌಲ್ಯಗಳನ್ನು ಮರೆತಿದ್ದೇವೆ. ಇಂದು ಅನೇಕ ವಿಚಾರಗಳಲ್ಲಿ ನಾವು ಬದಲಾಗಬೇಕಿದೆ. ಭ್ರಷ್ಟಾಚಾರ ಎಲ್ಲಾ ಕಡೆ ತಾಂಡವಾಡುತ್ತಿದೆ. ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಕಡಿಮೆ ಮಾಡುವುದು ನಮ್ಮಿಂದ ಸಾಧ್ಯ ಎಂದರು.

ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ನಿರೀಕ್ಷಕರಾದ ಪ್ರಭುಲಿಂಗಯ್ಯ ಹಿರೇಮಠ ಅವರು ಮಾತನಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಉನ್ನತ ಹುದ್ದೆ ಪಡೆದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಂಡ ಹಲವಾರು ನಾಯಕರು ನಮಗೆ ಸ್ಪೂರ್ತಿಯಾಗಲಿದ್ದಾರೆ. ಕೆಟ್ಟದನ್ನು ನಿಯಂತ್ರಿಸುವ ಕೆಲಸ ಮಾಡೋಣ. ಸರ್ಕಾರಿ ನೌಕರರಾಗಿ ಭ್ರಷ್ಟಾಚಾರ ನಿಯಂತ್ರಿಸುವ ಕರ್ತವ್ಯ ನಮ್ಮ ಮೇಲಿದೆ ಎಂದರು.

ವೈದ್ಯ ವೃತ್ತಿ ಅತೀ ಶ್ರೇಷ್ಠವಾದದ್ದು, ಈ ವೃತ್ತಿಯಲ್ಲಿ ಹೆಚ್ಚಿನ ಸಾರ್ವಜನಿಕ ಸೇವೆ ಮಾಡಲು ಸಾಧ್ಯ. ನಿಸ್ವಾರ್ಥದ ಸೇವೆ ಮಾಡಿ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ ಅದನ್ನು ತಡೆಯುವ ಕೆಲಸಕ್ಕೆ ಇಂದಿನ ಯುವ ಜನತೆ ಮುಂದಾಗಬೇಕು. ಯಾವುದೇ ಇಲಾಖೆಯಲ್ಲಿ ಹಣ ಕೊಟ್ಟು ಸೇವೆ ಪಡೆಯಬೇಡಿ. ಹಾಗೇ ಮಾಡಿದರೆ ಭ್ರಷ್ಟಾಚಾರ ನಡೆಯಲು ನೀವೇ ದಾರಿ ಮಾಡಿಕೊಟ್ಟಂತೆ. ಈ ಬಗ್ಗೆ ಸದಾ ಕಾಲ ಎಚ್ಚರಿಕೆಯಿಂದಿರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಮ್ಸ್ ಆಡಳಿತಾಧಿಕಾರಿ ಡಾ.ಚನ್ನಪ್ಪ, ವಿಮ್ಸ್ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ, ವಿಮ್ಸ್ ಅಧೀಕ್ಷಕರಾದ ಡಾ.ಅಶ್ವಿನಿ ಕುಮಾರ್ ಸೇರಿದಂತೆ ಇತರರು ಇದ್ದರು.

Related