ರಾಜ್ಯದಲ್ಲಿ ಹುಕ್ಕಾಬಾರ್‌ ನಿಷೇಧ!

ರಾಜ್ಯದಲ್ಲಿ ಹುಕ್ಕಾಬಾರ್‌ ನಿಷೇಧ!

ಬೆಂಗಳುರು, ಸೆ.19: ರಾಜ್ಯ ಸರ್ಕಾರ ಅರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಮಾದಕ ವಸ್ತುಗಳಾದ ಹುಕ್ಕಾ / ಶೀಶಾ ಬಾರ್ ಗಳನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಿ ಮಾದಕ ವಸ್ತುಗಳ ಮುಕ್ತ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ತಿಳಿಸಿದರು.

ವಿಕಾಸಸೌಧದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಜಂಟಿ ಸಭೆಯಲ್ಲಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಮಾದಕ ವಸ್ತುಗಳ ಮುಕ್ತ ಮಾದರಿ ರಾಜ್ಯವನ್ನು ಮಾಡಲು ಚರ್ಚೆ ನಡೆಸಲಾಯಿತು.

ಸಚಿವ ಬಿ. ನಾಗೇಂದ್ರ ಮಾತನಾಡಿ ಇಂದಿನ ಯುವಕರು ತಂಬಾಕು, ಹುಕ್ಕಾ ಬಾರ್, ಡ್ರಗ್ಸ್ ಗೆ ವ್ಯಸನಿಗಳಾಗಿ ತಮ್ಮ ವಿದ್ಯಾಭ್ಯಾಸ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗಿ ತಮ್ಮ ಜೀವನದಲ್ಲಿ ಅಮೂಲ್ಯ ಕ್ಷಣಗಳಿಂದ ದೂರವಾಗಿ ತೊಂದರೆಗೆ ಒಳಗಾಗಿದ್ದಾರೆ ವಿಶೇಷವಾಗಿ 13ರಿಂದ 29ರ ವಯಸ್ಸಿನ ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಜೀವನೋಪಾಯದ ಬಗ್ಗೆ ಕಾಳಜಿ ವಹಿಸಬೇಕು.

ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಯುವ ಜನತೆಯ ಅರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಎಲ್ಲಾ ಮಾದಕ ವಸ್ತುಗಳನ್ನು ಸಂಪೂರ್ಣ ನಿಷೇಧ ಮಾಡಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಸಂಪೂರ್ಣ ಮಾದಕ ವಸ್ತುಗಳ ಮುಕ್ತ ರಾಜ್ಯವನ್ನು ಮಾಡಲು ಈಗಾಗಲೇ ಸರ್ಕಾರದಲ್ಲಿ ಆದೇಶ ಸಿದ್ದಪಡಿಸಲಾಗಿದೆ ಎಂದರು.

ಡಾ.ವಿಶಾಲ್ ರಾವ್ ರವರ ತಂಡವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಚಾರ ಮಾಡಿ ಮಾದಕ ವಸ್ತುಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿ ನಮ್ಮ ಸರ್ಕಾರಕ್ಕೆ ಒಂದು ವರದಿಯನ್ನು ಕೂಡ ಸಲ್ಲಿಕೆ ಮಾಡಿದೆ ವರದಿ ಆಧಾರದ ಮೇಲೆ ಸರ್ಕಾರ ಮುಂದಿನ ಅಗತ್ಯ ಕ್ರಮವನ್ನು ಸರ್ಕಾರದ ವತಿಯಿಂದ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಶಶಿಕುಮಾರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಣದೀಪ್, ಉಪ ಕಾರ್ಯದರ್ಶಿ ಜಯಶ್ರೀ ಡಾ. ವಿಶಾಲ್ ರಾವ್, ರಾಜ್ಯ ಎನ್. ಎಸ್. ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related