ಹಿಂದು-ಮುಸ್ಲಿಂ ಅಲ್ಲ, ಮಾನವನಾಗಲು ಇದು ಸಕಾಲ

ಹಿಂದು-ಮುಸ್ಲಿಂ ಅಲ್ಲ, ಮಾನವನಾಗಲು ಇದು ಸಕಾಲ

ಇಸ್ಲಾಮಾಬಾದ್​, ಮಾ. 23 : ಮಹಾಮಾರಿ ಕರೊನಾ ವೈರಸ್​ ಇಡೀ ವಿಶ್ವದ ಮೇಲೆ ತನ್ನ ಕರಿನೆರಳು ಬೀರಿದೆ. ಧರ್ಮ ಮತ್ತು ಆರ್ಥಿಕ ಸ್ಥಾನಮಾನ ಬದಿಗೊತ್ತಿ ಒಬ್ಬರಿಗೊಬ್ಬರು ನೆರವಾಗಿ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್​ ಕರೆ ಕೊಟ್ಟಿದ್ದಾರೆ. ಅಖ್ತರ್​, ನಾವೆಲ್ಲರೂ ಜಾಗತಿಕ ಶಕ್ತಿಯಾಗಿ ಕೆಲಸ ಮಾಡುವ ಮತ್ತು ಅಧಿಕಾರಿಗಳು ನೀಡುವ ಮಾರ್ಗಸೂಚಿಗೆ ಅನುಗುಣವಾಗಿ ನಡೆದುಕೊಳ್ಳುವ ಎಂದಿದ್ದಾರೆ.  ವಿಶ್ವದೆಲ್ಲೆಡೆ ಇರುವ ನನ್ನ ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ, ಕರೊನಾವೈರಸ್​ ಒಂದು ಜಾಗತಿಕ ಬಿಕ್ಕಟ್ಟಾಗಿದ್ದು, ಧರ್ಮದಿಂದಾಚೆಗೆ ನಾವೊಂದು ಜಾಗತಿಕ ಶಕ್ತಿ ಎಂದು ಯೋಚಿಸೋಣ. ಲಾಕ್​ಡೌನ್​ ಮಾಡುವುದರಿಂದ ವೈರಸ್​ ಹರಡುವುದಿಲ್ಲ.

ಆದರೆ, ಸಭೆ-ಸಮಾರಂಭಗಳಲ್ಲಿ ಭಾಗಿಯಾಗಿ ಸಂವಹನ ನಡೆಸುವುದರಿಂದ ನಿಮಗೆ ಪ್ರಯೋಜನವಾಗದು ಎಂದು ಅಖ್ತರ್​ ಎಚ್ಚರಿಸಿದ್ದಾರೆ.ನೀವೇನಾದರೂ ವಸ್ತಗಳನ್ನು ಸಂಗ್ರಹಿಸುತ್ತಿದ್ದರೆ, ದಿನಗೂಲಿ ನೌಕರರ ಬಗ್ಗೆ ದಯವಿಟ್ಟು ಯೋಚಿಸಿ. ಸ್ಟೋರ್​ಗಳು ಖಾಲಿಯಾಗುತ್ತಿವೆ. ಮೂರು ತಿಂಗಳ ಬಳಿಕ ನೀವು ಬದುಕಿರುತ್ತೀರಾ ಎಂಬುದಕ್ಕೆ ಏನಾದರೂ ಗ್ಯಾರೆಂಟಿ ಇದೆಯಾ? ದಿನಗೂಲಿ ನೌಕರರ ಬಗ್ಗೆ ಚಿಂತಿಸಿ, ಅವರೇಗೆ ಅವರ ಕುಟುಂಬವನ್ನು ಪೋಷಿಸುತ್ತಾರೆ? ಜನರ ಬಗ್ಗೆ ಚಿಂತಿಸಿರಿ. ಹಿಂದು-ಮುಸ್ಲಿಂ ಎನ್ನುವುದಕ್ಕಲ್ಲ, ಮಾನವನಾಗುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಜನರು ಒಬ್ಬರಿಗೊಬ್ಬರು ಸಹಾಯಕ್ಕೆ ಮುಂದಾಗಿ. ವಸ್ತುಗಳನ್ನು ಸಂಗ್ರಹಿಸುವ ಬದಲು ನಿಧಿ ಸಂಗ್ರಹಿಸಿ ಎಂದು ಅಖ್ತರ್​ ಭಾವನಾತ್ಮಕ ಸಂದೇಶವನ್ನು ಜನರಿಗೆ ನೀಡಿದ್ದಾರೆ. ಶ್ರೀಮಂತರು ಇನ್ನು ಬದುಕುಳಿಯಲಿದ್ದಾರೆ. ಆದರೆ, ಬಡವರು ಉಳಿಯುವುದು ಹೇಗೆ?  ನಾವು ಪ್ರಾಣಿಗಳಂತೆ ಜೀವಿಸುತ್ತಿದ್ದೇವೆ. ಮಾನವರಂತೆ ಜೀವಿಸಿ, ವಸ್ತುಗಳನ್ನು ಸಂಗ್ರಹಿಸುವ ಬದಲು ಸಹಾಯಕ್ಕೆ ಮುಂದಾಗಿ, ಒಬ್ಬರನ್ನೊಬ್ಬರನ್ನು ನೋಡಿಕೊಳ್ಳಲು ಇದು ಸಕಾಲವೇ ಹೊರತು, ಬೇರೆಯಾಗುವುದಕ್ಕಲ್ಲ. ನಾವು ಮಾನವರಂತೆ ಬಾಳೋಣ ಎಂದಿದ್ದಾರೆ.

 

Related