ಭಾರಿ ಮಳೆಗೆ : ರಸ್ತೆ ಸಂಪರ್ಕ ಕಡಿತ

ಭಾರಿ ಮಳೆಗೆ  : ರಸ್ತೆ ಸಂಪರ್ಕ ಕಡಿತ

ಔರಾದ್ :   ತಾಲ್ಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತವಾಗಿದೆ.
ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಮಳೆಯ ತೀವ್ರತೆ ಜಾಸ್ತಿಯಾಗಿ ಮನೆಗಳಿಗೆ ನೀರು ನುಗ್ಗಿದೆ.

ವಡಗಾಂವ್ ಕಂದಗೂಳ ನಡುವಿನ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಪ್ರಯಾಣಿಕರು ಪರದಾಡಿದರು. ಸಂತಪುರ ವಡಗಾಂವ್ ನಡುವಿನ ನಾಗೂರ ಬಳಿಯ ಸೇತುವೆ ಮುಳಗಡೆಯಾಗಿ ಶನಿವಾರ ಬೆಳಿಗ್ಗೆ ತನಕ ಸಂಪರ್ಕ ಕಡಿತವಾಗಿತ್ತು.

ಸಂತಪುರ ಠಾಣಾಕುಶೂರ ನಡುವಿನ ನಾಗೂರ (ಎಂ) ಬಳಿಯ ಬದಲಿ ರಸ್ತೆ ಮಳೆಗೆ ಕಿತ್ತುಹೋಗಿ ಈ ಭಾಗದ ಸಂಚಾರ ಸ್ಥಗಿತವಾಗಿದೆ. ಅನೇಕ ಹೊಲಗಳಿಗೆ ನೀರು ನುಗ್ಗಿ ವಾರದ ಹಿಂದೆ ಬಿತ್ತನೆ ಮಾಡಿದ ಸೋಯಾ, ಉದ್ದು. ಹೆಸರು, ಜೋಳ ನೀರು ಪಾಲಾಗಿದೆ.
ಕಳೆದ ಸಾಲಿನ ಅತಿವೃಷ್ಟಿಯಿಂದ ಇನ್ನೂ ಚೇತರಿಸಿಕೊಳ್ಳದ ರೈತರಿಗೆ ಈ ಮಳೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

Related