ಮಾಸ್ಕ್ ಧರಿಸದವರಿಗೆ ದಂಡದ ಬಿಸಿ

ಮಾಸ್ಕ್ ಧರಿಸದವರಿಗೆ ದಂಡದ ಬಿಸಿ

ಸಿರುಗುಪ್ಪ : ನಗರದಲ್ಲಿ ಕೋವಿಡ್ ಇಳಿಮುಖವಾಗುತ್ತಿದ್ದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನಗರದ ವಾಣಿಜ್ಯ ಮಳಿಗೆಗಳಲ್ಲಿ, ಬಸ್‌ನಿಲ್ದಾಣಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ, ಕೋವಿಡ್ ನಿಯಮಾವಳಿಗಳನ್ನು ಅನುಸರಿಸದೇ ವ್ಯವಹರಿಸುತ್ತಿದ್ದ ವರ್ತಕರಿಗೆ, ಹಾಗೂ ರಸ್ತೆಬದಿ ವ್ಯಾಪಾರಿಗಳಿಗೆ, ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತಾಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಸಂಚರಿಸಿ ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ದಂಡವಿದಿಸಿದರು.

ನಂತರ ಮಾತನಾಡಿದ ಅವರು, ಈಗಾಗಲೇ ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದಾಗಿ ಅನೇಕ ಗಂಭೀರ ತೊಂದರೆಗಳನ್ನು ಅನುಭವಿಸಿದ್ದು ಸಾಕು ಈಗಿನಿಂದಲೇ ಎಚ್ಚರವಾಗಬೇಕು, ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಮೂರನೇ ಅಲೆಯು ತೀವ್ರ ಪರಿಣಾಮ ಬೀರಿದ್ದು ವರ್ತಕರು, ರಸ್ತೆಬದಿ ವ್ಯಾಪಾರಿಗಳು, ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ಗ್ರಾಹಕರಿಗೆ ಅರಿವು ಮೂಡಿಸಬೇಕು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸಾಮಾಜಿಕ ಅಂತರ ಪಾಲನೆ ಮಾಡುವುದು ಅತ್ಯಗತ್ಯವಾಗಿದ್ದು, ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಮೂರನೇ ಅಲೆ ತಾಲೂಕಿಗೆ ಹರಡದಂತೆ ಎಚ್ಚರವಹಿಸಲು ಎಲ್ಲಾ ನಾಗರೀಕರ, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಾಘವೇಂದ್ರರಾವ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿದ್ದಯ್ಯ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎ.ಗಾದಿಲಿಂಗಪ್ಪ, ಪಿ.ಎಸ್.ಐ. ಕೆ.ರಂಗಯ್ಯ, ತೆಕ್ಕಲಕೋಟೆ ಪಿಎಸ್‌ಐ ಶಿವಕುಮಾರ್ ನಾಯ್ಕ್, ಗ್ರಾಮಲೆಕ್ಕಾಧಿಕಾರಿ ಪರಮೇಶ, ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.

Related