ದೇವೇಗೌಡರ ಸುಳ್ಳು ಕೇಳಿ ನನಗೇ ನಾಚಿಕೆ ಆಯ್ತು : ಸಿಎಂ

ದೇವೇಗೌಡರ ಸುಳ್ಳು ಕೇಳಿ ನನಗೇ ನಾಚಿಕೆ ಆಯ್ತು : ಸಿಎಂ

ಚಿಕ್ಕಮಗಳೂರು: ಮೋದಿಯವರ ಜತೆ ಪೈಪೋಟಿಗೆ ಬಿದ್ದವರಂತೆ ದೇವೇಗೌಡರು ಹೇಳಿದ ಸುಳ್ಳುಗಳನ್ನು ಕೇಳಿ ನನಗೇ ನಾಚಿಕೆ ಆಯ್ತು. ದೇವೇಗೌಡರು ಮೋದಿಯವರ ಮಟ್ಟಕ್ಕೆ ಇಳಿದು ಸುಳ್ಳು ಹೇಳಿದ್ರಲ್ಲಾ ಅಂತ ನನಗೇ ನಾಚಿಕೆ ಆಯ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಗರದಲ್ಲಿಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ರಾಜ್ಯದ ಜನತೆಗೆ ಕೊಟ್ಟ ಖಾಲಿ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಸುಳ್ಳು ಹೇಳಿದ್ದಾರೆ. ಚೊಂಬು ಅಕ್ಷಯ ಪಾತ್ರೆ ಆಗಿದ್ದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಾಗಲಿಲ್ಲ? ರೈತರ ಸಾಲ ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶದ ರೈತರ ಸಾಲ 76 ಸಾವಿರ ಕೋಟಿ ರೂಪಾಯಿಯನ್ನು ಒಂದೇ ಸಾರಿ ಮನ್ನಾ ಮಾಡಿದರು. ಮೋದಿಯವರು 15 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಹೀಗಾಗಿ ಮೋದಿಯವರು ರಾಜ್ಯದ, ದೇಶದ ಮಧ್ಯಮ ವರ್ಗ ಮತ್ತು ಬಡವರ ಕೈಗೆ ಖಾಲಿ ಚೊಂಬು ಕೊಟ್ಟರು. ಶ್ರೀಮಂತ ಉದ್ಯಮಿಗಳ ಪಾಲಿಗೆ ಅಕ್ಷಯ ಪಾತ್ರೆ ಆದರು. ಈ ಸತ್ಯ ದೇವೇಗೌಡರಿಗೆ ಗೊತ್ತಿದ್ದೂ ಏಕೆ ರಾಜ್ಯದ ಜನರಿಗೆ ಸುಳ್ಳು ಹೇಳಿದರು ಎಂದು ಪ್ರಶ್ನಿಸಿದರು.

ಪ್ರತೀ ಕುಟುಂಬದ ಹಣ ಉಳಿತಾಯ ಆಗುತ್ತಿದೆ

ನಾವು ನುಡಿದಂತೆ ನಡೆದು ಪ್ರತೀ ಕುಟುಂಬಗಳ ಖಾತೆಗೆ, ಜನರ ಜೇಬಿಗೆ ಹಣ ಹಾಕುತ್ತಿರುವ ನಮ್ಮ ಗ್ಯಾರಂಟಿಗಳಿಗೆ ಮತ ಹಾಕುತ್ತೀರೋ, ಸುಳ್ಳುಗಳ ಸರದಾರನ ಖಾಲಿ ಚೊಂಬಿಗೆ ಮತ ಹಾಕುತ್ತೀರೋ ಯೋಚಿಸಿ ಎಂದು ಕರೆ ನೀಡಿದರು.

 

Related