ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ʼಬುಲ್ಡೋಜರ್ʼ ಜಪ..

ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ʼಬುಲ್ಡೋಜರ್ʼ ಜಪ..

ಬೆಂಗಳೂರು ಜು 30 : ಮಂಗಳೂರು ಸರಣಿ ಕೊಲೆಗಳಿಗೆ ಸಂಬಂಧಿಸಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಡುತ್ತಿರುವ ತಪ್ಪು ಹೆಜ್ಜೆಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿಕೆ ಅವರು; ಬಸವರಾಜ ಬೊಮ್ಮಾಯಿ ಅವರು ಇಡೀ ಕರ್ನಾಟಕದ ಮುಖ್ಯಮಂತ್ರಿ. ಕೇವಲ ಬಿಜೆಪಿಗಷ್ಟೇ ಅಲ್ಲ. ನಿನ್ನೆಯ ದಿನ ಅವರು ಮಸೂದ್ ಮತ್ತು ಪ್ರವೀಣ್ ನಿಟ್ಟಾರು ಹತ್ಯೆಯಾದ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಂವಿಧಾನದತ್ತವಾಗಿ ಸ್ವೀಕರಿಸಿದ ಪ್ರಮಾಣವಚನದ ಪಾವಿತ್ರ್ಯತೆಗೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ರಾಜಧರ್ಮ ಪಾಲಿಸುವುದಿರಲಿ, ಸ್ವಧರ್ಮವೇ ಹೇಳಿದ ʼಸರ್ವೇ ಜನೋ ಸುಖಿನೋ ಭವಂತುʼ ಎನ್ನುವ ತತ್ತ್ವವನ್ನೂ ಪಾಲಿಸುತ್ತಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಂದು ಕಿಡಿಕಾರಿದ್ದಾರೆ.

ಕೊಲೆಗೆ ಕೊಲೆಯೇ ಉತ್ತರವಲ್ಲ. ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು. ಹಾಗೆ ಮಾಡಲಿಲ್ಲ ಎಂದು ಕಿಡಿ ಕಾರಿದ್ದಾರೆ.

Related