ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಸರ್ಕಾರಕ್ಕಿಲ್ಲ: ಬಿ.ವೈ.ವಿ

ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಸರ್ಕಾರಕ್ಕಿಲ್ಲ: ಬಿ.ವೈ.ವಿ

ಬೆಳಗಾವಿ: ಬರಗಾಲದ ಕುರಿತು ಸದನದಲ್ಲಿ ಇವತ್ತು ಕೂಡ ಚರ್ಚೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ರಾಜ್ಯ ಸರಕಾರಕ್ಕೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಇಲ್ಲ. ಒಂದು ಕಡೆ ರೈತರಿಗೆ ಪರಿಹಾರ ಕೊಡುತ್ತಿಲ್ಲ. ಪರಿಹಾರ ಕೊಡಲು ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಮುಖ್ಯಮಂತ್ರಿಗಳು ಮೊನ್ನೆ ಘೋಷಿಸಿದ್ದಾರೆ. ಮತ್ತೊಂದು ಕಡೆ ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಬಳಸಬೇಕಿದ್ದ ಎಸ್‍ಇಪಿಟಿಎಸ್‍ಪಿ ಹಣವನ್ನು ಬೇರೆಡೆಗೆ ಬಳಸಿಕೊಳ್ಳುತ್ತಾರೆ. ರಾಜ್ಯ ಸರಕಾರದ ಆದ್ಯತೆ ಸಂಕಷ್ಟದಲ್ಲಿರುವ ರೈತರಲ್ಲ. ಅದನ್ನು ಬಿಟ್ಟು ರಾಜಕಾರಣ ಮಾಡುವುದು, ಅಲ್ಪಸಂಖ್ಯಾತರನ್ನು ಓಲೈಸುವುದೇ ಅದರ ಪ್ರಥಮ ಆದ್ಯತೆಯಾಗಿದೆ ಎಂದು ಟೀಕಿಸಿದರು.

ಬರಗಾಲದ ಕುರಿತು ಸದನದಲ್ಲಿ ಇವತ್ತು ಕೂಡ ಚರ್ಚೆ ಆಗಲಿದೆ. ಈ ಎಲ್ಲ ಸಂಗತಿಗಳನ್ನು ಕೂಡ ಸದನದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು. 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ 136 ಶಾಸಕರ ಬೆಂಬಲ ಇದೆ. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬ ಧಾಟಿಯಲ್ಲಿ ರಾಜ್ಯ ಸರಕಾರ ಆಡಳಿತ ಮಾಡುತ್ತಿದೆ.

 

 

 

 

Related