ಕೊರೋನಾ ತಡೆಯಲ್ಲಿ ಸರ್ಕಾರ ವಿಫಲ

ಕೊರೋನಾ ತಡೆಯಲ್ಲಿ ಸರ್ಕಾರ ವಿಫಲ

ಬೇಲೂರು: ರಾಜ್ಯ ಸರಕಾರ ಕೊರೋನಾ ತಡೆಗಟ್ಟುವಲ್ಲಿ ಪೂರ್ಣಪ್ರಮಾಣದಲ್ಲಿ ಸೋತಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ.ಶಿವರಾಂ ಹೇಳಿದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ವೆಚ್ಚವೆಂದು ೪೧೬೯ ಕೋಟಿ ರೂ. ಲೆಕ್ಕ ತೋರಿಸಲಾಗಿದೆ. ದುಡ್ಡು ಹೊಡೆಯಲು ಇದೊಂದು ಸದಾವಕಾಶ ಒದಗಿದಂತಾಗಿದೆ. ಅವ್ಯವಹಾರ ಪ್ರಶ್ನೆ ಮಾಡಿದರೂ ಕೊರೋನಾ ಸಂದರ್ಭ ಎನ್ನುವಂತಾಗಿದೆ. ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್ ಖರೀದಿಯಲ್ಲಿ ಗೋಲ್ಮಾಲ್ ನಡೆದಿದೆ. ಅಕ್ರಮದ ತನಿಖೆಗೆ ಸಿಬಿಐ ಬರಬೇಕಿದೆ. ಇದರ ಪಕ್ಕಾ ಲೆಕ್ಕ ಕೊಡುವಷ್ಟರಲ್ಲಿ ಸರಕಾರವೆ ಇರುವುದಿಲ್ಲ, ಆಮೇಲೆ ಯಾರನ್ನು ಲೆಕ್ಕ ಕೇಳುವುದು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ವತಿಯಿಂದ ಮನೆಮನೆಗೆ ತೆರಳಿ ಕೊರೊನಾ ಸೋಂಕಿತರನ್ನು ಗುರುತಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗೆ ಕಾಂಗ್ರೆಸ್ಸಿನಲ್ಲಿ ವಾರಿಯರ‍್ಸ್ ತಂಡವನ್ನು ರಚಿಸಲಾಗಿದೆ. ಅಕ್ರಮ ಪರಿಪೂರ್ಣ ಲೆಕ್ಕ ಸಿಗಬೇಕೆಂದರೆ ಸಿಬಿಐ ತನಿಖೆಯೇ ಆಗಬೇಕೇನೊ ಎಂದು ಟೀಕಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ನಿಶಾಂತ್ ಮಾತನಾಡಿ, ತಾ.ನಲ್ಲಿ ಈವರಗೆ ೫೯ ಆರೋಗ್ಯಹಸ್ತ ಕಿಟ್ ವಿತರಿಸಲಾಗಿದ್ದು ೧೬೦ ಕೊರೊನಾ ವಾರಿಯ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ೨೩ ವಾರ್ಡುಗಳಲ್ಲಿ ಕೊರೊನಾ ಪರೀಕ್ಷೆಗೆ ಇದೀಗ ಚಾಲನೆ ನೀಡಲಾಗಿದ್ದು ನಂತರ ಗ್ರಾಮಪಂಚಾಯಿತಿ ಹಂತದಲ್ಲಿ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷದ ೧೬೦ ನುರಿತ ವೈದ್ಯರ ತಂಡ ಇದರಲ್ಲಿ ಪಾಲ್ಗೊಂಡಿದ್ದು ಇವರಿಂದ ವಾರಿರ‍್ಸ್ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಜಿ.ಪಂ.ಸದಸ್ಯ ಸಯ್ಯದ್ ತೌಫಿಕ್ ಮಾತನಾಡಿ, ಕೊರೊನಾ ರೋಗಿಗಳು ಜಿಲ್ಲಾ ಹಾಗೂ ತಾಲೂಕು ಕೋವಿಡ್ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಷ್ಟದ ಕೆಲವಾಗಿದೆ. ಜನರಿಗೆ ಸರಕಾರಿ ಆಸ್ಪತ್ರೆ ಬಗ್ಗೆ ನಂಬಿಕೆಯೆ ಹೊರಟುಹೋಗಿದೆ. ಖಾಸಗಿ ಆಸ್ಪತ್ರೆಗಳಲ್ಲ ಕೊರೊನಾ ದಂದೆ ನಡೆಯುತ್ತಿದೆ. ಇದನ್ನು ಮನಗಂಡ ಕಾಂಗ್ರೆಸ್ ಪಕ್ಷದ ವರಿಷ್ಠರು ಕೊರೊನಾ ಪರೀಕ್ಷೆಗೆ ವೈದ್ಯರೊಂದಿಗಿನ ವಾರಿಯರ‍್ಸ್ ತಂಡವನ್ನು ರಚಿಸಿ ಆರೋಗ್ಯಹಸ್ತದ ಮೂಲಕ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

Related