ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಗದಗ ನಂಬರ್ 1

  • In State
  • July 22, 2022
  • 319 Views
ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಗದಗ ನಂಬರ್ 1

ಗದಗ, ಜು 22: ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಗದಗ ಜಿಲ್ಲೆ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಗದಗ ಜಿಲ್ಲೆಯ ಗ್ರಾಮಗಳಲ್ಲಿ ಜನರು ಅಪಾರ ಬೆಂಬಲ ನೀಡಿದ ಹಿನ್ನೆಲೆ ಯೋಜನೆಯ ಯಶಸ್ಸಿಗೆ ಕಾರಣವಾಗಿದೆ. ಗದಗ ಜಿಲ್ಲೆ ಯೋಜನೆಯ ಅನುಷ್ಠಾನದಲ್ಲಿ ಶೇಕಡಾ 97.84 ಇದ್ದರೆ, ಧಾರವಾಡ ಶೇಕಡಾ 95.37, ಮಂಡ್ಯ ಶೇಕಡಾ 77.55, ದಕ್ಷಿಣ ಕನ್ನಡ ಶೇಕಡಾ 75.86, ಕೊಪ್ಪಳ ಶೇಕಡಾ 75.66ರಷ್ಟು ಅಭಿವೃದ್ಧಿ ಕಂಡಿದೆ.

 

ಈ ಯೋಜನೆ ಬಗ್ಗೆ ಅಬ್ಬಿಗೇರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ್ ಮಾತನಾಡಿ, “ಕೆಲವು ಗ್ರಾಮಸ್ಥರು ಮೊದಲಿಗೆ ಜೆಜೆಎಂ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ವಿರೋಧ ವ್ಯಕ್ತಪಡಿಸಿದವರ ಮನವೊಲಿಸಲಾಯಿತು ಯೋಜನೆಯನ್ನು ಜಾರಿಗೆ ತರಲಾಯಿತು. ಈಗ ಗದಗದ ಬಹುತೇಕ ಗ್ರಾಮಗಳ ಮನೆಗಳು ನೀರಿನ ಸಂಪರ್ಕವನ್ನು ಹೊಂದಿವೆ. ವಾರಾಂತ್ಯದೊಳಗೆ ಕೆಲಸವನ್ನು ಪೂರ್ಣಗೊಳಿಸುತ್ತೇವೆ” ಎಂದು ಹೇಳಿದರು.

ಜೆಜೆಎಂ ಯೋಜನೆಯ ಬಗ್ಗೆ ಇಂಜಿನಿಯರ್‌ ಆನಂದ್ ಮಾತನಾಡಿ, “ಗ್ರಾಮಸ್ಥರು, ಗ್ರಾ.ಪಂ. ಸಿಬ್ಬಂದಿ, ಪಿಡಿಒಗಳು ಹಾಗೂ ಐಎಸ್‌ಎ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಈಗಾಗಲೇ ಕೆಲಸಗಳನ್ನು ಮುಕ್ತಾಯಗೊಳಿಸಿದ್ದೇವೆ. ಆದರೆ ಶಿರಹಟ್ಟಿ ತಾಲೂಕು ದೊಡ್ಡದಾಗಿರುವುದರಿಂದ ಇನ್ನು ಸಮಯ ಬೇಕಾಗುತ್ತದೆ. ಬೆಳಗಾವಿ, ಗದಗ, ಹುಬ್ಬಳ್ಳಿ-ಧಾರವಾಡ ಪ್ರದೇಶಗಳನ್ನು ಜಲಜೀವನ್‌ ಮಿಷನ್‌ಗೆ ಮೊದಲನೇ ಹಂತದಲ್ಲಿ ಆಯ್ಕೆ ಮಾಡಲಾಗಿದೆ” ಎಂದರು. ಗ್ರಾಮೀಣ ಭಾಗಗಳಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಜನರು ಈಗಲೂ ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಯಿಂದ ಜನರಿಗೆ ಬಿಡುಗಡೆ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್‌ ಮಿಷನ್‌ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಶುದ್ಧ, ಸುರಕ್ಷಿತ ನೀರನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

Related