ಗದಗ ಪತ್ರಕರ್ತನಿಗೆ ಕಿರಾಣಿ ವ್ಯಾಪಾರಿಗಳಿಂದ ಜೀವಬೆದರಿಕೆ; ತಹಸೀಲ್ದಾರ್ ಪ್ರಚೋದನೆ

ಗದಗ ಪತ್ರಕರ್ತನಿಗೆ ಕಿರಾಣಿ ವ್ಯಾಪಾರಿಗಳಿಂದ ಜೀವಬೆದರಿಕೆ; ತಹಸೀಲ್ದಾರ್ ಪ್ರಚೋದನೆ

ಗದಗ: ಲಾಕ್‍ಡೌನ್ ವೇಳೆ ತಹಸೀಲ್ದಾರ್ ಪತ್ರಕರ್ತನ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರಿಂದ ನೂರಕ್ಕೂ ಅಧಿಕ ಚಿಲ್ಲರೆ ಹಾಗೂ ಸಗಟು ಕಿರಾಣಿ ವ್ಯಾಪಾರಿಗಳು ರೋಣ ಪಟ್ಟಣದ ಪತ್ರಕರ್ತನ ಮನೆಗೆ ಮುತ್ತಿಗೆ ಹಾಕಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.

ರೋಣ ಪಟ್ಟಣದ ಚಿಲ್ಲರೆ ಹಾಗೂ ಸಗಟು ಕಿರಾಣಿ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಕಿರಾಣಿ ದಿನಸಿ ಮಾರಾಟ ಮಾಡುತ್ತಿದ್ದುದರ ಕುರಿತು ಪತ್ರಕರ್ತ ಸೋಮಶೇಖರ ಲದ್ದಿಮಠ ವರದಿ ಮಾಡಿದ್ದರು.

ವರದಿಯ ಪರಿಣಾಮ ಹೆಚ್ಚಿನ ದರಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ತಾವೇ ಹಲವು ದಿನಸಿಗಳ ದರಪಟ್ಟಿಯನ್ನು ಬಿಡುಗಡೆ ಮಾಡಿ ಅದೇ ದರಕ್ಕೆ ಮಾರಾಟ ಮಾಡುವಂತೆ ಕಿರಾಣಿ ವ್ಯಾಪಾರಸ್ಥರಿಗೆ ಆದೇಶಿಸಿದ್ದರು.

ತಹಸೀಲ್ದಾರ್ ಸೂಚಿಸಿದ ದರಗಳಿಗೆ ಮಾರಾಟ ಮಾಡದೇ ಮತ್ತೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ‘ರೋಣ ತಹಸೀಲ್ದಾರ್ ಆದೇಶಕ್ಕಿಲ್ಲ ಕಿಮ್ಮತ್ತು’ ಎಂಬ ತಲೆಬರಹದಡಿ ವರದಿ ಮಾಡಿದ್ದರು. ಇದರ ಸತ್ಯಾಸತ್ಯತೆ ಅರಿಯಲು ತಹಸೀಲ್ದಾರರು ತಮ್ಮ ಸಿಬ್ಬಂದಿ ಮೂಲಕ ಅನೇಕ ಕಿರಾಣಿ ಅಂಗಡಿಗಳಿಂದ ಹಲವು ವಸ್ತುಗಳನ್ನು ಖರೀದಿಸಿ ಹೆಚ್ಚಿನ ದರಕ್ಕೆ ಮಾರುತ್ತಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರ ನೆರವಿನೊಂದಿಗೆ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ಹಲವು ಕಿರಾಣಿ ಅಂಗಡಿಗಳಿಗೆ ಬೀಗ ಜಡಿದಿದ್ದರು. ಮರುದಿನ ‘ಹೆಚ್ಚಿನ ದರಕ್ಕೆ ದಿನಸಿ ಮಾರಾಟ: ಸಗಟು ಕಿರಾಣಿ ಅಂಗಡಿಗಳಿಗೆ ಬಿತ್ತು ಬೀಗ’ ಎಂದು ವರದಿ ಮಾಡಿದ್ದರು.

ತಹಸೀಲ್ದಾರ್ ಪ್ರಚೋದನೆ:
ರೋಣ ಪಟ್ಟಣದ ಚಿಲ್ಲರೆ ಹಾಗೂ ಸಗಟು ಕಿರಾಣಿ ಅಂಗಡಿಗಳು ಸ್ಥಳೀಯ ವೀರಭದ್ರೇಶ್ವರ ಸಭಾಭವನವೊಂದರಲ್ಲಿ ಸಭೆ ನಡೆಸಿದ ಬಳಿಕ ಕಿರಾಣಿ ಅಂಗಡಿ ಸೀಜ್ ಮಾಡಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರ ಬಳಿ ತೆರಳಿ ಪ್ರಶ್ನಿಸಿದಾಗ, ಇದರಲ್ಲಿ ನನ್ನದೇನೂ ತಪ್ಪಿಲ್ಲ, ಪತ್ರಕರ್ತ ಸೋಮಶೇಖರಯ್ಯ ಲದ್ದಿಮಠ ರೋಣ ತಹಸೀಲ್ದಾರ್ ಆದೇಶಕ್ಕಿಲ್ಲ ಕಿಮ್ಮತ್ತು ಎಂದು ಸುದ್ದಿ ಬರೆಯುತ್ತಿದ್ದಾನೆ, ಅದಕ್ಕೆ ನಾನು ನಿಮ್ಮ ಅಂಗಡಿಗಳ ಮೇಲೆ ದಾಳಿ ಮಾಡಿದ್ದೇನೆ. ಬೇಕಿದ್ದರೆ ನೀವು ಅವನನ್ನು ವಿಚಾರಿಸಿಕೊಳ್ಳಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ತಹಸೀಲ್ದಾರ್ ನಡೆಗೆ ಖಂಡನೆ:
ಲಾಕ್‍ಡೌನ್ ಸಂದರ್ಭದಲ್ಲಿ ಜನಪರ ವರದಿ ಮಾಡುವಂತೆ ಪತ್ರಕರ್ತರಿಗೆ ಧೈರ್ಯ ತುಂಬುವ ಬದಲು ಪತ್ರಕರ್ತರ ವಿರುದ್ಧ ಷಡ್ಯಂತರ ಮಾಡುತ್ತಿರುವ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರ ಧೋರಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಹಸೀಲ್ದಾರ್ ಜೆ.ಬಿ ಜಕ್ಕನಗೌಡ್ರ ಅವರನ್ನು ತಕ್ಷಣವೇ ಅಮಾನತ್ತುಗೊಳಿಸುವಂತೆ ವಿವಿಧ ಪಕ್ಷಗಳ ಪದಾಧಿಕಾರಿಗಳು ಹಾಗೂ ಹಲವಾರು ಸಂಘಟನೆಗೆಳ ಮುಖಂಡರು ಆಗ್ರಹಿಸುವ ಜೊತೆಗೆ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಂಡು ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ.

ಹಿರಿಯ ಪತ್ರಕರ್ತರ ಆಕ್ರೋಶ:
ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ದಂದೆಗಿಳಿದಿದ್ದ ಕಿರಾಣಿ ವ್ಯಾಪಾರಸ್ಥರ ವಿರುದ್ಧ ಗದಗ ಜಿಲ್ಲೆಯ ಹಿರಿಯ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜೀವ ಭಯದ ನೆರಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿಯಲ್ಲೂ ದುಡ್ಡು ಮಾಡಲು ಹೊರಟಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪತ್ರಕರ್ತರಿಗೆ ಭಯಬೇಡ:
ರೋಣ ತಹಸೀಲ್ದಾರರು ಕಿರಾಣಿ ವರ್ತಕರಿಗೆ ಈ ರೀತಿ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸರಿಯಲ್ಲ. ಈ ಬಗ್ಗೆ ನಾನು ಅವರಿಗೆ ವಾರ್ನ್ ಮಾಡುತ್ತೇನೆ, ಯಾವುದೇ ಕಾರಣಕ್ಕೂ ಗದಗ ಜಿಲ್ಲೆಯ ಪತ್ರಕರ್ತರು ಭಯಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಸದಾ ನಿಮ್ಮೊಂದಿಗಿದೆ.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಗದಗ.

Related