ಟರ್ಕಿ, ಯುಕೆ ಪ್ರಯಾಣಿಕರಿಗೆ ನಿಷೇಧ

ಟರ್ಕಿ, ಯುಕೆ ಪ್ರಯಾಣಿಕರಿಗೆ ನಿಷೇಧ

ನವದೆಹಲಿ, ಮಾ.17 : ಕೊರೋನ ವೈರಸ್ ಸೋಂಕು ದೇಶದಲ್ಲಿ ಇನ್ನಷ್ಟು ಹರಡುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಯುರೋಪಿಯನ್ ಯೂನಿಯನ್ (ಇಯು) ದೇಶಗಳು, ಯುರೋಪಿಯನ್ ಮುಕ್ತ ವ್ಯಾಪಾರ ಸಂಘ, ಟರ್ಕಿ ಮತ್ತು ಯುನೈಟೆಡ್ ಕಿಂಗ್ ಡಮ್ ನಿಂದ ಬರುವ ಪ್ರಯಾಣಿಕರಿಗೆ ಭಾರತ ಪ್ರವೇಶಿಸುವುದಕ್ಕೆ ಕೇಂದ್ರ ಸರಕಾರ ಸೋಮವಾರ ನಿಷೇಧ ವಿಧಿಸಿದೆ. “ಮಾರ್ಚ್ 18, 2020 ರಿಂದ ಯಾವುದೇ ವಿಮಾನಯಾನ ಸಂಸ್ಥೆಗಳು ಈ ರಾಷ್ಟ್ರಗಳ ಪ್ರಯಾಣಿಕರನ್ನು ಭಾರತಕ್ಕೆ ಕರೆ ತರಬಾರದು” ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಈ ಆದೇಶವನ್ನು ಮಾರ್ಚ್ 31 ರವರೆಗೆ ಜಾರಿಗೊಳಿಸುವ ನಿರೀಕ್ಷೆಯಿದೆ. ಪರಿಸ್ಥಿತಿಯನ್ನು ಮತ್ತೆ ಪರಿಶೀಲಿಸಲಾಗುತ್ತದೆ.
ಯುಎಇ, ಖತರ್, ಓಮನ್ ಮತ್ತು ಕುವೈತ್ ದೇಶಗಳಿಂದ ಅಥವಾ ಈ ದೇಶಗಳ ಮೂಲಕ ಬರುವ ಭಾರತೀಯ ಪ್ರಯಾಣಿಕರನ್ನು ಇತರರಿಂದ ಪ್ರತ್ಯೇಕಿಸಿ ಇಡುವ ಕಾಲಾವಧಿಯನ್ನು ಮಾರ್ಚ್ 18 ರಿಂದ ಮಾರ್ಚ್ 31 ರವರೆಗೆ ಸರಕಾರ ವಿಸ್ತರಿಸಿದೆ.
ಭಾರತ ಸರಕಾರವು ವಿದೇಶಿಯರ ಪ್ರವೇಶವನ್ನು ನಿರ್ಬಂಧಿಸಿದೆ ಮತ್ತು ಸಾಗರೋತ್ತರ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡುದಾರರಿಗೆ ನೀಡಲಾಗುವ ವೀಸಾ ಮುಕ್ತ ಸೌಲಭ್ಯವನ್ನು ಎಪ್ರಿಲ್ 15 ರವರೆಗೆ ತಡೆಹಿಡಿದಿದೆ. ಆದಾಗ್ಯೂ, ಸರ್ಕಾರದ ಇತ್ತೀಚಿನ ನಿರ್ದೇಶನಗಳು ಇಯು, ಯುಕೆ ಮತ್ತು ಟರ್ಕಿಯಿಂದ ಹಿಂದಿರುಗುವ ಭಾರತೀಯರಿಗೆ ಕಷ್ಟಕರವಾಗಲಿದೆ. ಇವುಗಳ ಜೊತೆಗೆ, ಚೀನಾ, ಇಟಲಿ, ಇರಾನ್, ಕೊರಿಯಾ ಗಣರಾಜ್ಯ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಯಿಂದ ಆಗಮಿಸುವ ಭಾರತೀಯ ಪ್ರಜೆಗಳು ಸೇರಿದಂತೆ ಎಲ್ಲಾ ಒಳಬರುವ ಪ್ರಯಾಣಿಕರಿಗೆ ಈಗಾಗಲೇ ಮಾರ್ಚ್ 13 ರಿಂದ ಕನಿಷ್ಠ 14 ದಿನಗಳವರೆಗೆ ನಿರ್ಬಂಧಿಸಲಾಗಿದೆ.

Related