ಕೊನೆಗೂ ಕೆಸಿಡಿಸಿ ಬಂದ್

ಕೊನೆಗೂ ಕೆಸಿಡಿಸಿ ಬಂದ್

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯ ಬಳಿಯ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಘಟಕದ ಕದ ಕೊನೆಗು ಮುಚ್ಚಿದೆ.
ಸ್ಥಳೀಯ ಶಾಸಕ ಸತೀಶ್ ರೆಡ್ಡಿ ನಿರಂತರ ಪ್ರಯತ್ನದಿಂದ ಇಂದು ಸೋಮಸುಂದರ ಪಾಳ್ಯದ ಕೆಸಿಡಿಸಿ ಘಟಕವನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ. ಬೆಂಗಳೂರು ನಗರದ 198 ವಾರ್ಡ್ಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಕಸ ಮತ್ತು ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಮರು ಬಳಕೆ ಮಾಡುವ ಸಲುವಾಗಿ ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯದ ಕೆರೆ ಬಳಿ ಕೆಸಿಡಿಸಿ ಘಟಕವನ್ನು ನಿರ್ಮಿಸಲಾಗಿತ್ತು.
ಆದರೆ ದಿನ ಕಳೆದಂತೆ ಕೆಸಿಡಿಸಿಯಲ್ಲಿನ ಬೆಟ್ಟದಂತಹ ಕಸದ ರಾಶಿಯಿಂದ ಹೊರ ಬರುತ್ತಿದ್ಸ ದುರ್ವಾಸನೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಹೌರಾಣಾಗಿದ್ದರು. ಕೆಟ್ಟ ವಾಸನೆಯಿಂದಾಗಿ ಎಚ್ಎಸ್ಆರ್ ಬಡಾವಣೆ, ಸೋಮಸುಂದರಪಾಳ್ಯ, ಹೊಸಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಜನವಸತಿ ಪ್ರದೇಶದ ವಾಸಿಗಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು.
ಇಷ್ಟಾದರೂ ಕೆಸಿಡಿಸಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ದುರ್ವಾಸನೆಯಿಂದಾಗಿ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಸ್ಥಳೀಯ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು. ಕೆಸಿಡಿಸಿ ಘಟಕವನ್ನು ಬಂದ್ ಮಾಡುವಂತೆ ಒತ್ತಾಯಿಸಿ ಶಾಸಕರ ಜೊತೆಗೂಡಿ ಸ್ಥಳೀಯ ನಿವಾಸಿಗಳು ಪದೇ ಪದೇ ಪ್ರತಿಭಟನೆ ನಡೆಸಿದ್ದರು.
ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಕೆಸಿಡಿಸಿ ಘಟಕವನ್ನು ಬಂದ್ ಮಾಡಿಸುವ ಭರವಸೆ ನೀಡಿದ್ದರು. ಅಂತಿಮವಾಗಿ ಸತೀಶ್ ರೆಡ್ಡಿ ನಿರಂತರ ಹೋರಾಟದ ಫಲವಾಗಿ ಕೊಟ್ಟ ಭರವಸೆಯಂತೆ ಇಂದು ಕೆಸಿಡಿಸಿ ಘಟಕದ ಕದ ಬಂದ್ ಮಾಡಿಸಿದ್ದಾರೆ.

Related