ವಿಧಾನಪರಿಷತ್‍ನಲ್ಲಿ ಜಟಾಪಟಿ; ನಾಚಿಕೆಗೇಡು

ವಿಧಾನಪರಿಷತ್‍ನಲ್ಲಿ ಜಟಾಪಟಿ; ನಾಚಿಕೆಗೇಡು

ಬೆಂಗಳೂರು: ವಿಧಾನ ಪರಿಷತ್ ಇಂದು ಅಕ್ಷರಶಃ ರಣರಂಗವಾಗಿದ್ದು, ರಾಜ್ಯದ ರಾಜಕೀಯ ಇತಿಹಾಸದಲ್ಲೇ ಇದೊಂದು ನಾಚಿಕೆಗೇಡಿನ ಸಂಗತಿ.

ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕುಳಿತುಕೊಳ್ಳುವುದನ್ನು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು. ಆಗ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಉಂಟಾಯಿತು.

ಕಲಾಪ ಆರಂಭಕ್ಕೂ ಮುನ್ನ ಉಪಸಭಾಪತಿ ಧರ್ಮೇಗೌಡ ಅವರು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಿದ್ದರು. ಇದನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಪೀಠದ ಹಿಂದೆ ಇರುವ ಬಾಗಿಲ ಮೂಲಕ ಸಭಾಪತಿ ಅವರು ಸದನದ ಸಭಾಂಗಣ ಪ್ರವೇಶಿಸದಂತೆ ಬಿಜೆಪಿ ಸದಸ್ಯರು ಬಾಗಿಲನ್ನು ಬಂದ್ ಮಾಡಿದರು.

ಮಾರ್ಷಲ್ ಅವರು ಬಾಗಿಲು ತೆಗೆಯಲು ಪ್ರಯತ್ನಿಸಿದರು. ಅದಕ್ಕೆ ಬಿಜೆಪಿ ಸದಸ್ಯರು ಅವಕಾಶ ನೀಡದೆ ಅಡ್ಡಿಪಡಿಸಿದರು. ಕಾಂಗ್ರೆಸ್ ಸದಸ್ಯ ನಜೀರ್ ಅಹಮ್ಮದ್ ಮತ್ತಿತರರು ಬಾಗಿಲು ತೆಗೆಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ.

ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಒಳಬರಲು ಸಾಧ್ಯವಾಗಲಿಲ್ಲ. ಆ ವೇಳೆ ಸಭಾಪತಿ ಅವರ ಪೀಠದ ಬಳಿ ಕಾಂಗ್ರೆಸ್ ಸದಸ್ಯರು ಧಾವಿಸಿ ಉಪಸಭಾಪತಿ ಧರ್ಮೇಗೌಡ ಅವರನ್ನು ಬಲವಂತವಾಗಿ ಎಳೆದು ಕೆಳಗೆ ತಳ್ಳಿದರು.

ಆ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಮಾರ್ಷಲ್‍ಗಳು ಒಳಬಂದು ರಕ್ಷಣೆ ಮಾಡಬೇಕಾಯಿತು.ಸಭಾಪತಿ ಪೀಠದಿಂದ ಧರ್ಮೇಗೌಡ ಅವರನ್ನು ಹೊರದಬ್ಬಲು ಕಾಂಗ್ರೆಸಿಗರು ಪ್ರಯತ್ನ ಪಡುತ್ತಿದ್ದರೆ, ಅದನ್ನು ತಡೆಯಲು ಬಿಜೆಪಿ ಸದಸ್ಯರು ಹರಸಾಹಸಪಟ್ಟರು.

Related