ರಸಗೊಬ್ಬರ ದರ ಹೆಚ್ಚಳ: ಬಿಸಿ ಪಾಟೀಲ್

ರಸಗೊಬ್ಬರ ದರ ಹೆಚ್ಚಳ: ಬಿಸಿ ಪಾಟೀಲ್

ಕಲಬುರಗಿ : ಪ್ರತಿ ಕ್ವಿಂಟಾಲ್ ರಸಗೊಬ್ಬರ ದರ ಹೆಚ್ಚಳಗೊಂಡಿರುವ ಹಿನ್ನೆಲೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಲಿದ್ದು, ಅದರಲ್ಲಿ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಸಚಿವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಸಗೊಬ್ಬರ ಉತ್ಪಾದನೆಗೆ ಬೇಕಾಗುವ ಫಾಸ್ಪರಿಕ್ ಆ್ಯಸಿಡ್ ದರ ಪ್ರತಿ ಬ್ಯಾರೆಲ್‌ಗೆ 400 ದಿಂದ 700 ಡಾಲರ್‌ಗೆ ಹೆಚ್ಚಳ ಮತ್ತು ಆಫ್ರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶದಿಂದ ಅಮದಾಗುವ ಕಚ್ಚಾವಸ್ತುಗಳ ದರ ದಿಢೀರ್ ಹೆಚ್ಚಳಗೊಂಡ ಕಾರಣ ದೇಶದಲ್ಲಿ ರಸಗೊಬ್ಬರ ದರ ಹೆಚ್ಚಳವಾಗಿದೆ. ಡಿ.ವಿ.ಸದಾನಂದ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಇದಕ್ಕೆ ಪರಿಹಾರ ನೀಡುವ ಭರವಸೆ ಇದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 7.55 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಪ್ರಮುಖ ಬೆಳೆಗಳಾದ ತೊಗರಿ, ಹತ್ತೀ, ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳ ಬಿತ್ತನೆಯ ಗುರಿ ಹೊಂದಿದೆ. ಇದಕ್ಕಾಗಿ 46559 ಕ್ವಿಂಟಾಲ್ ಬೀಜದ ಬೇಡಿಕೆಯಿದ್ದು, ದಾಸ್ತಾನು ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ 1,19,395 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಇದರ ದಾಸ್ತಾನಿಗೂ ಕ್ರಮ ವಹಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ನೀರಿನ ಸದ್ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಾಯೋಜಕತ್ವದಲ್ಲಿ ಶೇ.90 ರಷ್ಟು ರಿಯಾಯಿತಿಯೊಂದಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಕ್ಕಾಗಿ 2020-21ನೇ ಸಾಲಿನಲ್ಲಿ  ಜಿಲ್ಲೆಯಲ್ಲಿ 21.87  ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಮಾರ್ಚ್ ಅಂತ್ಯದ ವರೆಗೆ 21.9 ಕೋಟಿ ವೆಚ್ಚ ಮಾಡಿ 10,175 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಅಳವಡಿಸಿದೆ ಎಂದರು.

ಶಾಲಾ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿರಿಧಾನ್ಯಗಳಾದ ನವಣೆ, ರಾಗಿ, ತೊಗರಿ ನೀಡಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ದಿನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಅರ್. ನಿರಾಣಿ ಇದ್ದರು

Related