ಶ್ರೀಗಂಧ ಕಳ್ಳರ ಮೇಲೆ ಎನ್‌ಕೌಂಟರ್

ಶ್ರೀಗಂಧ ಕಳ್ಳರ ಮೇಲೆ ಎನ್‌ಕೌಂಟರ್

ಕುಣಿಗಲ್  : ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಶ್ರೀಗಂಧ ಕಳ್ಳರ ಮೇಲೆ ಉಪ ಅರಣ್ಯಾಧಿಕಾರಿ ಮಹೇಶ್ ಪೈರಿಂಗ್ ಮಾಡಿದ ಕಾರಣ ಕಳ್ಳನೋರ್ವ ಸ್ಥಳದಲ್ಲೇ ಮೃತಪಟ್ಟು, ಘಟನೆಯಲ್ಲಿ ಅರಣ್ಯ ಸಿಬ್ಬಂದಿಯೋ ರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀಗಂಧ ಮೀಸಲು ಅರಣ್ಯ ಪ್ರದೇಶ ಕಂಪಲಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ,

ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ, ಅರಣ್ಯ ಸಿಬ್ಬಂದಿ ಶೇಖರ್‌ನ ಎಡಗೈ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ,

ಘಟನೆ ವಿವರ

ಶನಿವಾರ ಮೂರು ರಿಂದ ನಾಲ್ಕು ಮಂದಿ ಶ್ರೀಗಂಧ ಚೋರರು ಬೆಳಗ್ಗೆ 9.30 ಸಮಯದಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಉಪ ಅರಣ್ಯಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಶಿವನಂಜಪ್ಪ, ಶರಣಪ್ಪ, ಶಿವನಂಜಯ್ಯ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಕಳ್ಳರು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಅರಣ್ಯಾಧಿಕಾರಿಗಳು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕಳ್ಳರು ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಉಪ ಅರಣ್ಯಾಧಿಕಾರಿ ಮಹೇಶ್ ನೇರವಾಗಿ ಕಳ್ಳರ ಮೇಲೆ ಗುಂಡು ಹಾರಿಸಿದ್ದಾಗ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಉಳಿದ ಮೂರು ಮಂದಿ ಕಳ್ಳರು ಪರಾರಿಯಾಗಿದ್ದಾರೆ, ಉಪ ಅರಣ್ಯಾಧಕಾರಿ ಮಹೇಶ್ ಶ್ರೀಗಂಧ ಚೋರರ ಮೇಲೆ ಎನ್ ಕೌಂಟರ್ ಮಾಡಿರುವ ಖಡಕ್ ಅಧಿಕಾರಿ. ಆರ್‌ಏಫ್‌ಓ ಮಹಮದ್ ಮನ್ಸೂರ್ ಅವರ ನೇತೃತ್ವದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್, ಡಿಎಫ್‌ಓ ಡಾ.ರಮೇಶ್, ಎಸಿಎಫ್‌ಓ ಚಿಕ್ಕರಾಜು, ತಹಸೀಲ್ದಾರ್ ಮಹಾಬಲೇಶ್ವರ್, ಡಿವೈಎಸ್‌ಪಿ ರಮೇಶ್, ಸಿಪಿಐ ಗುರುಪ್ರಸಾದ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related