ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ-ಶಾಸಕ

ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ-ಶಾಸಕ

ಮುದ್ದೇಬಿಹಾಳ : ಮಹಾರಾಷ್ಟ, ಗೋವಾ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ವಲಸೆ ಹೋಗಿ ವಾಪಸ್ಸಾಗಿರುವ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿಯೇ ನಿರಂತರವಾಗಿ ಕನಿಷ್ಠ  100 ದಿನಗಳ ಉದ್ಯೋಗವಕಾಶವನ್ನು ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿ ಸಂಜೆ ತಾಳಿಕೋಟಿ, ಮುದ್ದೇಬಿಹಾಳ ತಾಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೋನಾ ವೈರಸ್ ಬಗ್ಗೆ ಇನ್ನೂ ಆತಂಕ ಕಾರ್ಮಿಕರಲ್ಲಿ ಮನೆ ಮಾಡಿದೆ. ಅದನ್ನು ದೂರ ಮಾಡುವ ಕಾರ್ಯ ಅಧಿಕಾರಿಗಳಿಂದಾಗಬೇಕು, ದುಡಿಯಲು ಹೋಗಿದ್ದ  ಕಾರ್ಮಿಕರು ಬರಿಗೈಯ್ಯಲ್ಲಿ ವಾಪಾಸ್ಸಾಗಿದ್ದಾರೆ. ಅವರಿಗೆ ಕೆಲಸ ಕೊಟ್ಟು ಧೈರ್ಯ ತುಂಬುವ ಕಾರ್ಯ ಅಧಿಕಾರಿಗಳು  ನುಡಿದರು.

ತಾಪಂ ಇಓ ಶಶಿಕಾಂತ ಶಿವಪೂರೆ ಮಾತನಾಡಿ, ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನಲ್ಲಿ ಭೂರಹಿತರಾಗಿರುವ 4800 ಕಾರ್ಮಿಕರು ಪತ್ತೆಯಾಗಿದ್ದಾರೆ. ಅವರೆಲ್ಲರಿಗೂ ಉದ್ಯೋಗ ಕೊಡಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಎಲ್ಲಾ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳು ಆರಂಭವಾಗಿವೆ ಎಂದು ಮಾಹಿತಿ ನೀಡಿದರು.

ಕಟ್ಟಡ ಕಾರ್ಮಿಕ ಇಲಾಖೆಯಡಿ 12,800 ನೋಂದಾಯಿತ ಕಾರ್ಮಿಕರು ಇದ್ದು ಅದರಲ್ಲಿ ಈಗಾಗಲೇ ತಾಲೂಕಿನಲ್ಲಿ 5000 ಜನರಿಗೆ ಗುರುತಿನ ಕಾರ್ಡುದಾರರಿಗೆ ಹಣ ಜಮೆಯಾಗಿವೆ. ಕುಲಕಸಬುದಾರರಿಗೆ ನೇರವಾಗಿ ಕಾರ್ಮಿಕ ಇಲಾಖೆಗೆ ಅರ್ಜಿ ಕೊಟ್ಟರೆ ಸರಕಾರದ ಸೌಲಭ್ಯ ನೀಡಲಾಗುವುದು ಎಂದು ಕಾರ್ಮಿಕ ಅಧಿಕಾರಿ ಆಯ್‌ಎಚ್ ಇನಾಮದಾರ ಸಭೆಗೆ ಮಾಹಿತಿ ನೀಡಿದರು.

Related