ದೊಡ್ಮನೆ ಸೊಸೆ ನಾಳೆ ಕಾಂಗ್ರೆಸ್ ಪಕ್ಷ ಸೇರ್ಪಡೆ!

ದೊಡ್ಮನೆ ಸೊಸೆ ನಾಳೆ ಕಾಂಗ್ರೆಸ್ ಪಕ್ಷ ಸೇರ್ಪಡೆ!

ಬೆಂಗಳೂರು: ನಟ ಶಿವರಾಜ್​ಕುಮಾರ್​ ಪತ್ನಿ ಗೀತಾ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಸಮ್ಮುಖದಲ್ಲಿ ಸೇರ್ಪಡೆ ಆಗಲಿದ್ದಾರೆ. ಗೀತಾ ಅವರು ಮಾಜಿ ಸಿಎಂ ದಿ. ಎಸ್.ಬಂಗಾರಪ್ಪನವರ ಪುತ್ರಿ. ಈ ಹಿಂದೆ ಜೆಡಿಎಸ್​ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಇದೀಗ ಸೊರಬದಲ್ಲಿ ಮಧು ಬಂಗಾರಪ್ಪ ಪರ ಕಾಂಗ್ರೆಸ್ ಪಕ್ಷದ ಪರವಾಗಿ ಗೀತಾ ಶಿವರಾಜ್​ಕುಮಾರ್​ ಪ್ರಚಾರ ನಡೆಸಿದ್ದರು. ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಗೀತಾ ಶಿವಾರಾಜ್​ಕುಮಾರ್ ನಾಳೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರಂತೆ ಎಂದು ನಿರ್ಮಾಪಕ‌ ಕೆ.ಪಿ.ಶ್ರೀಕಾಂತ್​ ಅವರು ಕೂಡ ದೃಢಪಡಿಸಿದ್ದಾರೆ.

ವರನಟ ಡಾ. ರಾಜ್​​ಕುಮಾರ್​ ಕುಟುಂಬದಲ್ಲಿ ರಾಜಕೀಯ ಪ್ರವೇಶ ಮಾಡಿರುವವರಲ್ಲಿ ಗೀತಾ ಶಿವರಾಜ್​ಕುಮಾರ್​ ಮಾತ್ರ. ಮಾಜಿ ಸಿಎಂ ದಿ. ಎಸ್.ಬಂಗಾರಪ್ಪ ಮತ್ತು ಸಹೋದರ ಮಧು ಬಂಗಾರಪ್ಪ ಜೊತೆ ರಾಜಕೀಯವಾಗಿ ಗುರುತಿಸಿಕೊಂಡಿದ್ದರು. 2021ರಲ್ಲಿ ಮಧು ಬಂಗಾರಪ್ಪ ಜೆಡಿಎಸ್​ ಪಕ್ಷದಿಂದ ಹೊರಬಂದು ಬಳಿಕ ಕಾಂಗ್ರೆಸ್​ ಪಕ್ಷ ಸೇರಿದ್ದರು. ಆವಾಗಲೇ ಗೀತಾ ಶಿವರಾಜ್​ಕುಮಾರ್​​​ ಕಾಂಗ್ರೆಸ್​ ಸೇರುತ್ತಾರೆ ಎಂಬ ಮಾತು ಕೇಳಿಬಂದಿದ್ದವು.

2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್​ಕುಮಾರ್​ ಸೋಲು ಕಂಡಿದ್ದರು.

 

Related