ಬಿಜೆಪಿ ಸರ್ಕಾರದ ಆದ್ಯತೆ ಜನರಲ್ಲ, ಅವರ ಪಕ್ಷದ ನಾಯಕರು ಮಾತ್ರ: ಡಿ.ಕೆ.ಶಿ

ಬಿಜೆಪಿ ಸರ್ಕಾರದ ಆದ್ಯತೆ ಜನರಲ್ಲ, ಅವರ ಪಕ್ಷದ ನಾಯಕರು ಮಾತ್ರ: ಡಿ.ಕೆ.ಶಿ

ಬೆಂಗಳೂರು, ಜೂ 25 : ‘ರಸ್ತೆಗುಂಡಿಗಳ ವಿಚಾರವಾಗಿ ಮಾಧ್ಯಮಗಳು ಅಭಿಯಾನ ಮಾಡಿದರೂ ಈ ಸರಕಾರ ಅರಿಯಲಿಲ್ಲ. ಜನ ತೊಂದರೆ ಅನುಭವಿಸುವಾಗ ರಸ್ತೆ ಗುಂಡಿ ಮುಚ್ಚಲಿಲ್ಲ. ತಮ್ಮ ನಾಯಕರು ಬರುತ್ತಿದ್ದಾರೆ ಎಂದ ತಕ್ಷಣ ರಸ್ತೆಗೆ ಡಾಂಬರು ಹಾಕಿದರು. ಅವರ ಆದ್ಯತೆ ಜನರಲ್ಲ, ಅವರ ನಾಯಕರು. ಅವರಿಗೆ ಜನರ ಜೀವನ, ಸಮಸ್ಯೆ ಮುಖ್ಯವಲ್ಲ, ಅವರ ನಾಯಕರುಗಳ ಅನುಕೂಲ ಮುಖ್ಯ ಎಂಬುದು ಸಾಬೀತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಉತ್ತರಿಸಿದ ಅವರು, ‘ಬಿಜೆಪಿ ನಾಯಕರು ಊರು ತುಂಬಾ ಫ್ಲೆಕ್ಸ್, ಬಾವುಟ ಹಾಕಿದ್ದರು. ಆದರೆ ಕಾಂಗ್ರೆಸ್ ನಾಯಕರು ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಪದ್ಮನಾಭನಗರದ ಕಾಂಗ್ರೆಸ್ ಕಚೇರಿ ಒಳಗೆ ಕಟೌಟ್ ಹಾಕಿದ್ದಕ್ಕೆ ನೊಟೀಸ್ ನೀಡಿದ್ದಾರೆ. ಈಗ ಬೆಂಗಳೂರು ತುಂಬಾ ಬಿಜೆಪಿ ಹಾಕಿದ್ದರೂ ಪಾಲಿಕೆ ಆಯುಕ್ತರು, ಪೊಲೀಸ್ ಕಮಿಷನರ್ ಯಾವುದೇ ಕೇಸ್ ಹಾಕಿಲ್ಲ ಯಾಕೆ?’ ಎಂದು ಕಿಡಿಕಾರಿದರು.

ಕಾನೂನು ಹೋರಾಟ ಮಾಡುತ್ತಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಮೇಲೆ ಕಾನೂನು ಬಳಸಿ ಪ್ರಕರಣ ದಾಖಲಿಸಿ, ಅವರಿಗೆ ಪ್ರಕರಣ ದಾಖಲಿಸದಿದ್ದಾಗ ಅವರ ವಿರುದ್ದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾವು ಆ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿ ಈಶ್ವರಪ್ಪನವರು ಕೇವಲ 144 ಸೆಕ್ಷನ್ ಉಲ್ಲಂಘನೆ ಅಷ್ಟೇ ಅಲ್ಲ, ಸಾರ್ವಜನಿಕ ಆಸ್ತಿ ನಾಶ ಮಾಡಿದರು. ಆದರೂ ಅಲ್ಲಿನ ಎಸ್ ಪಿ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ’ ಎಂದು ಹೇಳಿದರು.

ಪಠ್ಯ ಪರಿಷ್ಕರಣೆ ವಿಚಾರವಾಗಿ ಆರ್ ಅಶೋಕ್ ಅವರ ಪತ್ರಿಕಾಗೋಷ್ಠಿ ಕುರಿತು ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರ ಕಾಲದಲ್ಲಿ ತಪ್ಪಿದ್ದರೆ, ಆಗ ಅವರು ಬಾಯಿ ಮುಚ್ಚಿಕೊಂಡು ಕೂತಿದ್ದು ಯಾಕೆ? ಅವತ್ತು ಯಾಕೆ ಪ್ರಶ್ನೆ ಮಾಡಲಿಲ್ಲ? ಕಾಂಗ್ರೆಸ್ ಪಕ್ಷಕ್ಕಿಂತ ಜನರೇ ಇದನ್ನು ಹೆಚ್ಚಾಗಿ ವಿರೋಧಿಸುತ್ತಿದ್ದಾರೆ’ ಎಂದು ಉತ್ತರಿಸಿದರು.

Related