ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಗ್ರಾಮಸ್ಥರಿಗೆ ತ್ವರಿತವಾಗಿ ತಲುಪುವಂತಾಗಬೇಕು. ಸಾರ್ವಜನಿಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ. ಶ್ರೀನಿವಾಸ್ ತಿಳಿಸಿದರು.

ಅವರು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಇಂದು ಹಮ್ಮಿಕೊಂಡಿದ್ದ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

ಕಂದಾಯ ಇಲಾಖೆ ವತಿಯಿಂದ ಜಿಲ್ಲೆಯ ಐದು ಕಡೆ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಮಳಿಗೆಗಳನ್ನು ಹಾಕಲಾಗಿದೆ ಸಾರ್ವಜನಿಕರು ಈ ಮಳಿಗೆಗಳಿಗೆ ಭೇಟಿ ನೀಡಿ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿಯನ್ನು ಪಡೆಯಬಹುದು ಎಂದರು.

ಗ್ರಾಮ ವಾಸ್ತವ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ.  ಗ್ರಾಮಸ್ಥರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಅಹವಾಲು ಮೂಲಕ ನೀಡಿ ಅದನ್ನು ಬಗೆಹರಿಸಿಕೊಳ್ಳಬಹುದು. ಇದನ್ನು  ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಕಂದಾಯ ಇಲಾಖೆಯಿಂದ ನೀಡಲಾಗುವ ಪಿಂಚಣಿ ಸೌಲಭ್ಯ, ಪೌತಿ ಖಾತೆ, ಪೋಡಿ ದುರಸ್ತಿ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಸವಲತ್ತು, ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಮಾರಂಭದಲ್ಲಿ ಸಾಂಕೇತಿಕವಾಗಿ 45 ಜನರಿಗೆ ಪಿಂಚಣಿ ಸೌಲಭ್ಯವನ್ನು ವಿವರಿಸಲಾಯಿತು. ಆರೋಗ್ಯ ಇಲಾಖೆ ವತಿಯಿಂದ 30 ಜನರಿಗೆ ಎಬಿಆರ್‌ಕೆ ಕಾರ್ಡನ್ನು ನೀಡಲಾಯಿತು.

ಚಂದಾಪುರ ಪುರಸಭೆಯ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ಬೊಮ್ಮಸಂದ್ರ ಪುರಸಭಾ ವತಿಯಿಂದ ಪರಿಶಿಷ್ಟ ಜಾತಿಯ ಆರು ಜನರಿಗೆ ಆರೋಗ್ಯ ಬಾಂಡ್ ವಿತರಿಸಲಾಯಿತು. ಕೃಷಿ ಇಲಾಖೆ ವತಿಯಿಂದ ರೈತರಿಗೆ ಬೀಜ ಹಾಗೂ ಕೃಷಿ ಯಂತ್ರೋಪಕರಣ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಗಳಾದ ಸಂಗಪ್ಪ, ಬೆಂಗಳೂರು ದಕ್ಷಿಣ ಉಪವಿಭಾಗಧಿಕಾರಿಗಳಾದ   ಎ. ಎನ್. ರಘುನಂದನ್, ಆನೇಕಲ್ ತಾಲ್ಲೂಕು ವಿಶೇಷ ತಹಶೀಲ್ದಾರ್ ರಾದ ವೆಂಕಟಾಚಲಪತಿ, ಆನೇಕಲ್ ತಾಲ್ಲೂಕು ಕಾರ್ಯಾನಿರ್ವಾಹಣ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ವೀಣಾ ಮುನಿರೆಡ್ಡಿ ಮತ್ತು ತಾಲ್ಲೂಕು ಹಿಂದುಳಿದ ಕಲ್ಯಾಣಾಧಿಕಾರಿಗಳಾದ ಜ್ಯೋತಿ ಹಂಪಿ ಹೋಳಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related