ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು : ವಿಶೇಷ ಹೂಡಿಕೆ ವಲಯ ನಿರ್ಮಾಣ ಕುರಿತು ಅಧ್ಯಯನ ನಡೆಸಲು ರಾಜ್ಯದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದ ತಂಡ ಶುಕ್ರವಾರ ಗುಜರಾತ್ ರಾಜ್ಯಕ್ಕೆ ತೆರಳಿದ್ದು, ಅಲ್ಲಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.

ರೂಪಾನಿ ಭೇಟಿ ಬಳಿಕ ಮಾತನಾಡಿದ ಶೆಟ್ಟರ್ ಅವರು, ದೇಶದ ಮೊದಲ ವಿಶೇಷ ಹೂಡಿಕೆ ವಲಯವನ್ನು ಗುಜರಾತ್ ನಿರ್ಮಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿಶೇಷ ಹೂಡಿಕೆ ವಲಯ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಗುಜರಾತ್ ಅಭಿವೃದ್ಧಿ ಮಾದರಿಯನ್ನು ಕೊಂಡಾಡುತ್ತಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸಚಿವ ಶೆಟ್ಟರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅಧ್ಯಯನಕ್ಕೆ ಗುಜರಾತ್‌ಗೆ ತೆರಳಲು ನಮ್ಮ ಅಭ್ಯಂತರವಿಲ್ಲ. ಗುಜರಾತ್ ಮಾಡೆಲ್ ಎಲ್ಲಿದೆ. ಕೇಂದ್ರ ಸರ್ಕಾರ ಗುಜರಾತ್ ಉದ್ಧಾರ ಮಾಡಲಿ. ಅದನ್ನು ಬೇಡ ಎನ್ನುವುದಿಲ್ಲ. ಆದರೆ, ಲಸಿಕೆ ವಿಚಾರದಲ್ಲೇ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ? ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ, ಗುಜರಾತ್ ರಾಜ್ಯಕ್ಕೆ ಮೀಸಲಿಡಲಾಗುತ್ತಿರುವ ಅರ್ಧದಷ್ಟು ಲಸಿಕೆಯೂ ರಾಜ್ಯಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಧ್ವನಿ ಎತ್ತಬೇಕೆಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಸಹ ಮಾಡಲಾಯಿತು. ವ್ಯಾಪಾರಿಗಳು, ಉದ್ಯಮಿಗಳ ಪರ ನಾವಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಬಿಜೆಪಿಯವರು ತೆರಿಗೆ ಮನ್ನಾ ಏಕೆ ಮಾಡಲಿಲ್ಲ? ನಿರುದ್ಯೋಗ ಸೃಷ್ಠಿಸಿದ್ದೇ ಗುಜರಾತ್ ಮಾಡೆಲ್ಲಾ? ಈ ಬಗ್ಗೆ ಎಲ್ಲ ಸಂಸದರೂ ಮಾತನಾಡಬೇಕು. ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ. ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ ಎಂದು ಒತ್ತಾಯಿಸಿದರು.

Related