ಹೊರರಾಜ್ಯಗಳಿಂದ ಬಂದವರಿಗೆ ತಪಾಸಣೆ-ಕ್ವಾರಂಟೈನ್ 

ಹೊರರಾಜ್ಯಗಳಿಂದ ಬಂದವರಿಗೆ ತಪಾಸಣೆ-ಕ್ವಾರಂಟೈನ್ 

ಧಾರವಾಡ: ದೇಶದ ವಿವಿಧ ರಾಜ್ಯಗಳಲ್ಲಿ ಉಳಿದ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು, ಇತರ ಜನರನ್ನು ತವರು ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಿದೆ.

ಕೇಂದ್ರದ ಮಾರ್ಗಸೂಚಿ ಆಧರಿಸಿ, ರಾಜ್ಯದ ಆರೋಗ್ಯ ಇಲಾಖೆಯಂತೆ ಹೊರ ರಾಜ್ಯದಿಂದ ಬರುವ ಜನರ ಆರೋಗ್ಯ ಸ್ಥಿತಿ  ಗಮನಿಸಿ ಕ್ವಾರಂಟೈನ್‌ಗೆ ಒಳಪಡಿಸಲು ಸಿದ್ಧತೆ ಮಾಡಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ಸಂಚರಿಸುವ ಸಾಧ್ಯತೆ ಇದೆ. ರೈಲು, ರಸ್ತೆ, ಹಾಗೂ ಜಲಮಾರ್ಗಗಳಿಂದಲೂ ಜನರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿವೆ. ರಾಜ್ಯದ ಮೂಲಕ ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳನ್ನು ತಡೆಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯಕ್ಕೆ ಆಗಮಿಸುವ ಜನರು ಕಡ್ಡಾಯ ಸೇವಾಸಿಂಧು ಪೋರ್ಟಲ್ ಮೂಲಕ ಪಡೆದಿರುವ ಇ-ಪಾಸ್‌ನ್ನು ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ಮಾಡಬೇಕು. ರಾಜ್ಯದ ಗಡಿಭಾಗದಲ್ಲಿ ಆಗಮಿಸುವ ಜನರನ್ನು ತಪಾಸಣೆಗೊಳಪಡಿಸಬೇಕು. ಗಡಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಆಗಮನ ಮತ್ತು ನಿರ್ಗಮನ ಪಾಯಿಂಟ್ ಗುರುತಿಸಿದೆ. ಆ ಸ್ಥಳಗಳ ಮೂಲಕವೇ ವಾಹನಗಳ ಆಗಮನ, ನಿರ್ಗಮನ ಮಾರ್ಗ ಕಡ್ಡಾಯ ಎಂದರು.

ಧಾರವಾಡಕ್ಕೆ 11 ಜನ ಆಗಮನ

ಹೊರ ರಾಜ್ಯಗಳಾದ ರಾಜಸ್ಥಾನದಿಂದ 8, ಮಹಾರಾಷ್ಟ್ರದ ಪಾಂಡವಪುರದಿಂದ ಒಬ್ಬರು ಹಾಗೂ ತಮಿಳುನಾಡಿನ ಇಬ್ಬರು ಸೇರಿ ಜಿಲ್ಲೆಗೆ ಬುಧವಾರ ಒಟ್ಟು 11 ಜನ ಆಗಮಿಸಿದ್ದಾರೆ.

ಕೃಷಿ ವಿವಿ ಆವರಣದಲ್ಲಿ ಅವರ ವೈದ್ಯಕೀಯ ತಪಾಸಣೆ ಮಾಡಿ, ಹೋಂ ಕ್ವಾರಂಟೈನ್ ಗೆ ಒಳಪಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್.ಹಂಚಾಟೆ, ತಹಸೀಲ್ದಾರ್ ಸಂತೋಷ ಬಿರಾದಾರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ಜೊತೆಗೆ ರಾಜ್ಯದೊಳಗಿನ ವಿವಿಧ ಜಿಲ್ಲೆಗಳಿಂದ ಮೇ.4ರಿಂದ ಈವರೆಗೆ 1,487 ಜನ ಆಗಮಿಸಿದ್ದಾರೆ ಹಾಗೂ 2,147 ಜನರು ವಿವಿಧ ಜಿಲ್ಲೆಗಳಿಗೆ ತೆರಳಿದ್ದಾರೆ ಎಂದು ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ ತಿಳಿಸಿದ್ದಾರೆ.

Related