ಯಲಹಂಕದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ : ಮುಖ್ಯ ಆಯುಕ್ತರು

ಯಲಹಂಕದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ : ಮುಖ್ಯ ಆಯುಕ್ತರು

ಬೃಹತ್ ಬೆಂಗಳೂರು ಮಹಾನಗರ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.

ಯಲಹಂಕ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಯಲಹಂಕ ಕೆರೆಯು 292 ಎಕರೆ ಪ್ರದೇಶದಲ್ಲಿದ್ದು, ಕೆರೆಯಲ್ಲಿ ಹೂಳನ್ನು ತೆರವುಗೊಳಿಸಿ, ಬಂಡ್, ಜೌಗು ಪ್ರದೇಶ, ಇನ್ಲೆಟ್-ಔಟ್ಲೆಟ್, ಕೆರೆಗೆ ಕೊಳಚೆ ನೀರು ಸೇರದಿರುವ ಹಾಗೆ ತಿರುವುಗಾಲುವೆ ನಿರ್ಮಾಣ, ಭದ್ರತಾ ಸಿಬ್ಬಂದಿಯ ಕೊಠಡಿ, ಸೈಕಲ್ ಟ್ರ್ಯಾಕ್, ವಿಹಾರಕ್ಕೆ ಬರುವವರಿಗೆ ವಿರಾಮದ ಸ್ಥಳ ಹಾಗೂ ಕೆರೆಯ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. ಮಳೆಗಾಲದ ವೇಳೆ ಸ್ಥಳೀಯ ಪ್ರದೇಶದಲ್ಲಿ ಜಾಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳ ದುರಸ್ಥಿ ಕಾರ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ನವೆಂಬರ್ ತಿಂಗಳಲ್ಲಿ ಜೋರು ಮಳೆಯಾದ ಪರಿಣಾಮ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಜಲಾವೃತಗೊಂಡು ಸಾಕಷ್ಟು ಸಮಸ್ಯೆಯಾಗಿತ್ತು. ಇದೀಗ ಆ ಭಾಗದಲ್ಲಿ ಜಲಾವೃತವಾಗದೆ ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ರಾಜಕಾಲುವೆಗಳ ಅಗಲೀಕರಣ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.
ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಮೊಬಿ ಪಾರ್ಕ್ ಗೆ ಮೂರು ವರ್ಷ ಟೆಂಡರ್ ನೀಡಲಾಗಿದ್ದು, ವಾರ್ಷಿಕ 13 ಲಕ್ಷ ರೂ. ಪಾಲಿಕೆಗೆ ಪಾವತಿ ಮಾಡಲಿದೆ.


1.95 ಕಿ.ಮೀ ಉದ್ದದ ಯಲಹಂಕ ನ್ಯೂ ಟೌನ್ ಮುಖ್ಯ ರಸ್ತೆ(ಶೇಷಾದ್ರಿಪುರಂ ಕಾಲೇಜು ಮುಖ್ಯ ರಸ್ತೆಯಿಂದ ಅರೋಮಾ ಬೇಕರಿಯವರೆಗೆ)ಯನ್ನು 13 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರತಿಯಲ್ಲಿದ್ದು, ಈಗಾಗಲೇ ಶೇ. 70 ರಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ. ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಬದಿ ಡಕ್ಟ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ಪೈಕಿ ತ್ವರಿತವಗಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮಾನ್ಯ ಸ್ಥಳೀಯ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್, ವಲಯ ಆಯುಕ್ತರಾದ ಶ್ರೀ ರಂಗಪ್ಪ, ಜಂಟಿ ಆಯುಕ್ತರಾದ ಪೂರ್ಣಿಮಾ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪರಶುರಾಮ್ ಶಿನ್ನಾಳ್ಕರ್, ಮುಖ್ಯ ಇಂಜಿನಿಯರ್ ಗಳಾದ ರಂಗನಾಥ್, ಸುಗುಣಾ, ಪ್ರಹ್ಲಾದ್, ಲೋಕೇಶ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.*

Related