5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ: ಸಚಿವ ಬಿ.ನಾಗೇಂದ್ರ

5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ನಮ್ಮ ಸರ್ಕಾರದ ಮಹತ್ತರ ಯೋಜನೆಗಳ ಮೂಲಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರ ಬದುಕಿನಲ್ಲಿ ಆರ್ಥಿಕ ಚೈತನ್ಯ ತುಂಬಲು ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳು ರೂಪಿಸಿದೆ. ಈ ಯೋಜನೆಗಳಿಂದ ಮಹಿಳಾ ಸಬಲೀಕರಣ ಜೊತೆಗೆ ಎಲ್ಲಾ ವರ್ಗಗಳಿಗೆ ಸೇರಿದ ಕಡು ಕಷ್ಟದಲ್ಲಿರುವ ಜನರ ಜೀವನ ಮಟ್ಟ ಸುಧಾರಣೆಯಾಗಲು ಈ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು.

ಅವರು ಇಂದು ಬಳ್ಳಾರಿಯಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಮ್ಸ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಮಹಿಳಾ ಸಬಲೀಕರಣಕ್ಕಾಗಿ ಅನುಷ್ಟಾನಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯು, ಕುಟುಂಬದ ಯಜಮಾನಿಗೆ ಮಾಸಿಕ ರೂ.2000/- ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸೇವಾ ಸಿಂಧು ತಂತ್ರಾಂಶದಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,03,790 ಕುಟುಂಬ ಆಹಾರ ಪಡಿತರ ಚೀಟಿಗಳಲ್ಲಿ ಒಟ್ಟು 2,60,000 ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದು, ಶೇ.86ರಷ್ಟು ಪ್ರಗತಿಯಾಗಿರುತ್ತದೆ.

ರಾಜ್ಯದಾದ್ಯಾಂತ ವಿವಿಧ ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಶಕ್ತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ 5,71,000 ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ.

ಮಾಸಿಕ 200 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 2,26,272 ಫಲಾನುಭವಿಗಳು ಇದರ ಲಾಭ ಪಡೆದಿರುತ್ತಾರೆ.

ಘನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯ ಒಟ್ಟು 05 ತಾಲೂಕುಗಳಲ್ಲಿ 2,29,499 ಅರ್ಹ ಪಡಿತರ ಚೀಟಿಗಳ ಒಟ್ಟು 8,81,082 ಪಡಿತರ ಕುಟುಂಬ ಸದಸ್ಯರುಗಳಿಗೆ ತಲಾ 05 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇನ್ನುಳಿದ 05 ಕೆ.ಜಿ. ಅಕ್ಕಿಗೆ ಸಮನಾಂತರವಾಗಿ ರೂ.170/- ರಂತೆ ಒಟ್ಟು ರೂ.14,54,36,020/- ಮೊತ್ತವನ್ನು ಪಡಿತರದಾರರ ಕುಟುಂಬಗಳಿಗೆ ನೇರ ಹಣ (ಡಿಬಿಟಿ) ಮೂಲಕ ಸಂದಾಯ ಮಾಡಲಾಗಿದೆ.

ಮತ್ತೊಂದು ಯೋಜನೆಯಾದ ಯುವ ನಿಧಿ ಯೋಜನೆಯು 2022-23 ನೇ ಸಾಲಿನಲ್ಲಿ ತೇರ್ಗಡೆಯಾಗಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಪದವೀದರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ ರೂ.3,000 ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿ ಯವಕರಿಗೆ ಪ್ರತಿ ತಿಂಗಳು ರೂ.1,500 ಗಳ ಭತ್ಯೆಯನ್ನು ನೀಡುವ ಸಲುವಾಗಿ ಘೋಷಿಸಿಲಾಗಿದ್ದು, ಈ ಯೋಜನೆಯನ್ನು ಬರುವ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಹೀಗೆ ಸರ್ಕಾರದ 5 ಮಹತ್ತರ ಯೋಜನೆಗಳಲ್ಲಿ ಸರ್ಕಾರವು 4 ಯೋಜನೆಗಳನ್ನು ಪೂರೈಸಿ ನುಡಿದಂತೆ ನಡೆದುಕೊಂಡಿದೆ ಎಂದರು.

ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತ: ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಗರದಲ್ಲಿ ಸುಸಜ್ಜಿತವಾದ ರೂ.2 ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ನಿರ್ಮಾಣ ಮಾಡಲಾಗಿದೆ, ಅದೇ ರೀತಿಯಾಗಿ ರೂ.2 ಕೋಟಿ ಅನುದಾನದಲ್ಲಿ ಅಥ್ಲೆಟಿಕ್ಸ್ ಸಿಂಥಟಿಕ್ ಟ್ಯಾಕ್ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಸ್ಟೇಡಿಯಂ ಹತ್ತಿರ ಉತ್ತಮವಾದ ನೀರಿನ ಕೆರೆಯನ್ನು ನಿರ್ಮಿಸಲಾಗಿದ್ದು, ನಗರದ ಸಾರ್ವಜನಿಕರಿಗೆ ಬಳಕೆಗೆ ಅನುಕೂಲಕರವಾಗಿದೆ ಎಂದರು.ಬಳ್ಳಾರಿ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಈಗಾಗಲೇ “ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್” (ಏSಅಂ) ರವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸ್ಟೇಡಿಯಂ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು

ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಆದ್ಯತೆ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದವರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಪರಿಶಿಷ್ಟ ವರ್ಗದವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಇಲಾಖೆಯು ಶ್ರಮಿಸುತ್ತಿದೆ ಎಂದು ಹೇಳಿದರು.

ಭಾರತ ಸಂವಿಧಾನ ಅನುಚ್ಛೇಧ 275(1)ರಡಿ ಹಾಗೂ ವಿಶೇಷ ಕೇಂದ್ರಿಯ ನೆರವಿನಡಿ ಮೂಲಭೂತ ಸೌಲಭ್ಯಗಳಾದ ಹೈನುಗಾರಿಕೆ ಘಟಕ, ಹಸು, ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು, ಸಾಗಾಣಿಕೆ ವಾಹನ ಘಟಕಗಳಿಗೆ 263 ಫಲಾನುಭವಿಗಳಿಗೆ ಸ್ವತ್ತು ವಿತರಿಸಿ, ರೂ.229.26 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅಂತರ್ಜಾತಿಯ ವಿವಾಹ, ಸಾಮೂಹಿಕ ವಿವಾಹಗಳಿಗೆ ಅನುದಾನ ನೀಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ತಾಲೂಕು, ಹೋಬಳಿ ಗ್ರಾಮದ ಮಟ್ಟದ ವಾಲ್ಮೀಕಿ ಸಮುದಾಯಭವನಗಳ ನಿರ್ಮಾಣ ಕಾಮಗಾರಿಗೆ ರೂ.625.00 ಲಕ್ಷ ಅನುದಾನ ಮಂಜೂರಾಗಿದ್ದು, ರೂ.117.50 ಲಕ್ಷ ಅನುದಾನವನ್ನು ಈಗಾಗಲೇ ಏಜೆನ್ಸಿಯವರಿಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಅಪರೆಲ್ ಪಾರ್ಕ್, ಬಳ್ಳಾರ ಜೀನ್ಸ್ ಉದ್ಯಮಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದು, ಈ ಕುರಿತು ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಸಂವಾದ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸುಸಜ್ಜಿತವಾದ ಅಪರೆಲ್ ಪಾರ್ಕ್‍ನ್ನು ಬಳ್ಳಾರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಹೀಗೆ ಜಿಲ್ಲೆಯ ವಿವಿಧ ಇಲಾಖೆಗಳು ಹಾಗೂ ಸರ್ಕಾರದ ಯೋಜನೆಗಳ ಮೂಲಕ ಪ್ರಗತಿಯತ್ತ ಸಾಗಲು ತಾವೆಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಿ ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡ್ಯೊಯಲು ಕಂಕಣಬದ್ದರಾಗೋಣ ಎಂದು ಹೇಳಿದ ಅವರು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ದುಡಿಯಬೇಕೆಂದು ಪಣತೊಡುತ್ತಾ, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಸಾಧಿಸುವುದೆಂಬ ದೃಢ ವಿಶ್ವಾಸದೊಂದಿಗೆ ಭಾರತ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡುತ್ತಾ ಪ್ರಗತಿಪರವಾದ ಸುಸ್ಥಿರ ಅಭಿವೃದ್ದಿಯೊಂದಿಗೆ ಸುಭಿಕ್ಷ ನಾಡನ್ನು ಕಟ್ಟಲು ಎಲ್ಲರೂ ಈ ದಿನ ಶಪಥ ಮಾಡೋಣ ಎಂದು ತಮ್ಮ ಧ್ವಜಾರೋಹಣ ಸಂದೇಶದಲ್ಲಿ ತಿಳಿಸಿದರು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ಮಹಾನಿರೀಕ್ಷಕ ಲೋಕೇಶ್ ಕುಮಾರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಮೊಹಮ್ಮದ್ ಜುಬೇರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

 

Related