ತಂತ್ರಜ್ಞಾನ ಆಧರಿಸಿ ಸೈಬರ್ ಅಪರಾಧಗಳ ಪತ್ತೆ ಮಾಡಬೇಕು: ಸಿಎಂ

ತಂತ್ರಜ್ಞಾನ ಆಧರಿಸಿ ಸೈಬರ್ ಅಪರಾಧಗಳ ಪತ್ತೆ ಮಾಡಬೇಕು: ಸಿಎಂ

ಹುಬ್ಬಳ್ಳಿ: ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಪುಣೆಯ ಖಡಕ್‌ವಾಸ್ಲಾದ ಎನ್.ಡಿ.ಎ.ಮಾದರಿಯ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ತಂತ್ರಜ್ಞಾನ, ವಿಜ್ಞಾನ ಆಧರಿಸಿ ಸೈಬರ್ ಅಪರಾಧಗಳ ತ್ವರಿತ ಪತ್ತೆ ಮಾಡುವ ಕೌಶಲ್ಯವನ್ನು ಪೊಲೀಸರು ಬೆಳೆಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ಉದ್ಘಾಟನೆ  ಮತ್ತು ಗೋಕುಲ ರಸ್ತೆ, ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮಧ್ಯಮ ಕ್ರಮಾಂಕದ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಪುಣೆಯ ಖಡಕ್‌ವಾಸ್ಲಾದಲ್ಲಿರುವ  ಎನ್ ಡಿ ಎ ಮಾದರಿಯ ತರಬೇತಿ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಲಾಗುವುದು. ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ ಒದಗಿಸಬಹುದು. ಸೂಕ್ತ ಪ್ರಸ್ತಾವನೆ ಬಂದರೆ ರಾಜ್ಯ ಸರ್ಕಾರದಿಂದ ಹಣ ಒದಗಿಸಲಿದೆ. ತಂತ್ರಜ್ಞಾನದ ದುರುಪಯೋಗ ತಡೆಯಬೇಕು.

ಡಿಜಿಟಲ್ ಹಾಗೂ ಸೈಬರ್ ಅಪರಾಧಗಳ ಪತ್ತೆ ಕಾರ್ಯದಲ್ಲಿ ಇನ್ನೂ ಸುಧಾರಣೆ ತರಲಾಗುವುದು. ಪೊಲೀಸ್ ಠಾಣೆಗಳು ಸಮಾಜದ ಭದ್ರತೆಗೆ ಅತ್ಯಗತ್ಯ. ದಕ್ಷವಾದ ಸೇನೆ ಹಾಗೂ ಪೊಲೀಸರು ಇರುವಲ್ಲಿ ಶಾಂತಿ ನೆಲೆಸಿರುತ್ತದೆ. ಶಾಂತಿ ಇದ್ದಲ್ಲಿ ಅಭಿವೃದ್ಧಿಯಾಗುತ್ತದೆ. ಕರ್ನಾಟಕ ಪೊಲೀಸರು ದಕ್ಷತೆಗೆ ಹೆಸರಾಗಿದ್ದಾರೆ. ಹುಬ್ಬಳ್ಳಿಯ ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಪೊಲೀಸ್ ಠಾಣೆಗಳ ಅಗತ್ಯತೆ ಮನಗಂಡು ಅಲ್ಲಿ ಠಾಣೆ ಸ್ಥಾಪಿಸಲಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕು.

ಕಾನೂನು ಚೌಕಟ್ಟಿನಲ್ಲಿ ಜನರಿಗೆ ನೆರವು ನೀಡಲು ಅಧಿಕಾರಿಗಳು ಹಿಂದೇಟು ಹಾಕಬಾರದು. 2025 ರೊಳಗೆ 11 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 2 ಸಾವಿರ ವಸತಿ ಗೃಹಗಳು ತಲೆ ಎತ್ತಲಿವೆ. ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಒಂದೇ ವರ್ಷದ ಅವಧಿಯಲ್ಲಿ 117 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. 8101 ಶಾಲೆಗಳ ಕಟ್ಟಡಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ತಲಾ 7 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿ 81 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ.

ಈ ಸಂದರ್ಭದಲ್ಲಿ ಗಣಿ, ಭೂವಿಜ್ಞಾನ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ,ಕೈಮಗ್ಗ, ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ರಾಜೇಶ ಕೋಟೆಣ್ಣವರ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಉಪಮೇಯರ್ ಉಮಾ ಮುಕುಂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಎಡಿಜಿಪಿ ಅರುಣ ಚಕ್ರವರ್ತಿ, ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ, ಎನ್.ಸತೀಶಕುಮಾರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜಗಲಾಸರ್,ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್, ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಜಿಪಂ‌ ಸಿಇಓ ಡಾ.ಸುರೇಶ ಇಟ್ನಾಳ,ಕೆ ಎಸ್‌ಪಿಹೆಚ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಬಿ.ಎಸ್.ಮತ್ತಿತರರು ವೇದಿಕೆಯಲ್ಲಿದ್ದರು.

 

Related