ರೈತರ ಸಾಲ ಮನ್ನಾ ಮಾಡಲು ಆಗ್ರಹ

ರೈತರ ಸಾಲ ಮನ್ನಾ ಮಾಡಲು ಆಗ್ರಹ

ಬೆಂಗಳೂರು: ಕೃಷಿ ಉತ್ಪನ್ನಗಳ, ಹಾಗೂ ಉಪಕರಣಗಳ  ಮೇಲಿನ ಜಿಎಸ್ಟಿ ರದ್ದುಪಡಿಸಬೇಕು. ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೋವಿಡ್ ಸಂದರ್ಭದಲ್ಲಿ ನಲುಗಿದ್ದಾರೆ. ಹೀಗಾಗಿ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ ರೈತರ ಸಾಲ ಮನ್ನಾ ಕೂಡ  ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಈ ಹಿನ್ನಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರಾಷ್ಟ್ರೀಯ ರೈತ ಮುಖಂಡರ ಕಿಸಾನ್ ಮಹಾ  ಪಂಚಾಯತ್ ಬೆಂಗಳೂರಿನಲ್ಲಿ ಸೆಪ್ಟೆಂಬರ್ 26 ರಂದು ರೈತರ ಬೃಹತ್ ರ್ಯಾಲಿ ನಡೆಸಲಿದೆ ಎಂದು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನೆಡೆದ ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕರೂ ಆಗಿರುವ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೂರು ಕೃಷಿ  ಕಾಯ್ದೆಗಳನ್ನು ರದ್ದುಮಾಡಿ ಎಂ.ಎಸ್.ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ.‌ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ 2021ರ ನವಂಬರ್ ತಿಂಗಳಲ್ಲಿ ಭರವಸೆ ನೀಡಿದ ಪ್ರಧಾನಿ ಮೋದಿ ಹುಸಿಗೊಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕಾತರಿ ನೀಡಲು ಸಮಿತಿ ರಚಿಸಿದ್ದೇವೆ ಎಂದೂ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತ ಮುಖಂಡರನ್ನು ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ. ಆದಕಾರಣ ದೇಶಾದ್ಯಂತ ರೈತ ಚಳುವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ದಕ್ಷಿಣ ಭಾರತದ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ರಾಷ್ಟ್ರೀಯ ಮುಖಂಡರ ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಲ್ಲ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಎಂ. ಎಸ್. ಪಿ ಖಾತರಿ ಕಾನೂನು ಜಾರಿಗೆ ತರಬೇಕು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. 2022ರ ವಿದ್ಯುತ್ ಕಾಯ್ದೆ  ಖಾಸಗಿಕರಣ ತಿದ್ದುಪಡಿ ಕೈಬಿಡಬೇಕು. ಕಬ್ಬಿನ ಎಫ್ ಆರ್ ಪಿ ದರ ಪುನರ್ ಪರಿಶೀಲನೆ ನಡೆಸಿ  ವೈಜ್ಞಾನಿಕವಾಗಿ ನ್ಯಾಯಯುತ  ಕಬ್ಬಿನ ದರ ನಿಗದಿ ಮಾಡಬೇಕು ಎನ್ನುವುದು ಸಭೆಯಲ್ಲಿ ಚರ್ಚಿಯಾಗುವ ಮುಖ್ಯ ವಿಷಯಗಳಾಗಿದೆ. ಅನೇಕ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ದೇಶಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.

Related