ರಾಜಕೀಯ ಮುಗಿದೇ ಹೋಯ್ತು ಎಂದವರಿಗೆ ಡಿಕೆಶಿ ತಿರುಗೇಟು

ರಾಜಕೀಯ ಮುಗಿದೇ ಹೋಯ್ತು ಎಂದವರಿಗೆ ಡಿಕೆಶಿ ತಿರುಗೇಟು

ಬೆಂಗಳೂರು: ನಾನು ಯಾವ ತಪ್ಪೂ ಮಾಡಿಲ್ಲ. ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಆದರೆ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಜಗ್ಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪಕ್ಷಕ್ಕಾಗಿ ನಾನು ಅನೇಕ ತ್ಯಾಗ ಮಾಡಿದ್ದೇನೆ, ಪಕ್ಷವೂ ನನ್ನನ್ನು ಕಡೆಗಣಿಸಿದ್ದರೂ ನಾನು ಪಕ್ಷ ದ್ರೋಹ ಮಾಡಲಿಲ್ಲ. ನನ್ನ ಈ ನಿಷ್ಠೆಗೆ ಈಗ ಬೆಲೆ ಸಿಕ್ಕಿದೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ಸವಾಲಿನಿಂದ ಹಿಂದೆ ಸರಿಯುವವನಲ್ಲ. ನನಗೆ ಹಿಂಬಾಲಕರು ಬೇಡ. ಪಕ್ಷವನ್ನು ಬೂತ್ ಮಟ್ಟದಿಂದ ಕಟ್ಟಿ ಬೆಳೆಸುವುದು ನನ್ನ ಗುರಿ ಎಂದರು.
ಕನಕಪುರದ ಬಂಡೆ ಅಲ್ಲ, ವಿಧಾನಸೌಧದ ಮೆಟ್ಟಿಲುಗಳ ಕಲ್ಲು ಚಪ್ಪಡಿ ನಾನಾದರೆ ಸಾಕು
ನಾನು ಕನಕಪುರದ ಬಂಡೆ ಅಲ್ಲ. ವಿಧಾನಸೌಧದ ಮೆಟ್ಟಿಲುಗಳ ಕಲ್ಲು ಚಪ್ಪಡಿ ನಾನಾದರೆ ಸಾಕು, ಆ ಕಲ್ಲನ್ನು ಮೆಟ್ಟಿಕೊಂಡು ಹಲವಾರು ಮಂದಿ ವಿಧಾನಮಂಡಲಕ್ಕೆ ತೆರಳುವಂತಾಗಬೇಕು. ಅನೇಕ ಹುದ್ದೆಗಳನ್ನು ನೋಡಿದ್ದೇನೆ. ಆದರೆ ನಾನು ಈಗಲೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಪಕ್ಷವೇ ನನಗೆ ಎಲ್ಲ. ಇಡೀ ಜೀವಮಾನದವರೆಗೂ ಪಕ್ಷಕ್ಕೆ ದುಡಿಯುತ್ತೇನೆ. ವಿದ್ಯಾರ್ಥಿ ದಿಸೆಯಿಂದಲೇ ಜನ ಸೇವೆಗೆ ಮುಡಿಪಾಗಿಟ್ಟೆದ್ದೇನೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲೇ ದುಡಿಯುತ್ತೇನೆ. ಅಧ್ಯಕ್ಷ ಸ್ಥಾನ ಸಿಕ್ಕಿರಬಹುದು. ಆದರೆ ನಾನು ಕೇವಲ ಕಾರ್ಯಕರ್ತ ಎಂದರು. ಇದೊಂದು ಐತಿಹಾಸಿಕ ದಿನವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಂಬಲ ನನಗೆ ಇರಲಿಲ್ಲ, ಈ ಸವಾಲನ್ನು ಎದುರಿಸಲು ಉತ್ಸಾಹ ಇದೆ ಎಂದರು.
ಮುಗಿದೇ ಹೋಯ್ತು ಎಂದವರಿಗೆ ತಿರುಗೇಟು
ಜೈಲಿಗೆ ಹೋದಾಗ ರಾಜಕೀಯ ಮುಗಿದೋಯ್ತು ಅಂತಿದ್ರು ರಾಜಕಾರಣ ಮುಗಿದೇ ಹೋಯ್ತು ಎಂಬ ಸಂದರ್ಭದಲ್ಲಿ ಸೋನಿಯಾ ಗಾಂಧಿ ಜೈಲಿಗೆ ಬಂದು ನಿನ್ನ ಜೊತೆಗೆ ಇದ್ದೇನೆ ಎಂದು ನನಗೆ ಧೈರ್ಯ ತುಂಬಿದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು ಎಂದು ನೆನಪಿಸಿಕೊಂಡು ಭಾಷಣದ ವೇಳೆ ಡಿಕೆಶಿ ಭಾವುಕರಾದರು.
ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ. ಒಗ್ಗಟ್ಟಿನಿಂದ ಪಕ್ಷವನ್ನು ಮುನ್ನಡೆಸುತ್ತೇನೆ. ಯಾರಿಗೂ ನಾನು ರಾಜಕೀಯದಲ್ಲಿ ದ್ರೋಹ ಮಾಡಿಲ್ಲ, ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಅದೆಲ್ಲಾ ಪಕ್ಷಕ್ಕಾಗಿ ಕೆಲಸ ಮಾಡಿರುವುದಕ್ಕಾಗಿ ಅಧಿಕಾರ ಸಿಗದಿದ್ದಾಗಲೂ ಚಕಾರ ಎತ್ತಿಲ್ಲ ಪಕ್ಷದ ವಿವಿಧ ವಿಭಾಗಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದು ಡಿಕೆಶಿ ತಿಳಿಸಿದರು.
ಪಕ್ಷವನ್ನು ಮಾಸ್ ಬೇಸ್‌ನಿಂದ ಕೇಡರ್ ಬೇಸ್‌ಗೆ ಪರಿವರ್ತನೆ ಮಾಡಲಾಗುವುದು. ಕೇರಳ ಮಾದರಿಯಲ್ಲಿ ಪಕ್ಷ ಸಂಘಟನೆ, ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕೆಲಸ ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಡವೇ ಬೇಡ, ಪಕ್ಷ ಪೂಜೆ ಮಾಡಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ‘ಪ್ರತಿಜ್ಞಾ ದಿನ’ ವಿಶೇಷ ಕಾರ್ಯಕ್ರಮದ ಮೂಲಕ ಪದಗ್ರಹಣ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಧ್ವಜವನ್ನು ಶಿವಕುಮಾರ್ ಗೆ ಹಸ್ತಾಂತರ ಮಾಡಿದರು. ಕಾರ್ಯಾದ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಸಹ ಪದಗ್ರಹಣ ಮಾಡಿದರು.
ಇದೇ ವೇಳೆ ರಾಜ್ಯದ ಗ್ರಾಮ ಪಂಚಾಯ್ತಿ, ನಗರ ಸಭೆ ಹಾಗೂ ಪುರಸಭೆ ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಭಾಗಿ, ಪ್ರತಿಜ್ಞೆ ಸ್ವೀಕರಿಸಿದರು.

Related